

ಬೀದರ್: ಬಿಜೆಪಿಗೆ ದಲಿತ ನಾಯಕರ ಏಳಿಗೆ ಸಹಿಸಲಾಗುತ್ತಿಲ್ಲ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ ಆರೋಪಿಸಿದ್ದಾರೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮುಖ್ಯಸ್ಥರಾಗಿರುವ ಸಿದ್ಧಾರ್ಥ ಶಿಕ್ಷಣ ಸಂಸ್ಥೆಗಳ ಮೇಲಿನ ಇಡಿ ದಾಳಿ, ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧದ ಟೀಕೆ-ಟಿಪ್ಪಣೆಗಳು ದಲಿತ ನಾಯಕರನ್ನು ದುರ್ಬಲಗೊಳಿಸುವ ಹುನ್ನಾರದ ಭಾಗವಾಗಿವೆ ಎಂದು ಆಪಾದಿಸಿದ್ದಾರೆ.
ಡಾ. ಜಿ. ಪರಮೇಶ್ವರ್ ಮುಖ್ಯಮಂತ್ರಿ ಹುದ್ದೆಗೆ ಅರ್ಹರಾದ ನಾಯಕರಾಗಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ವರ್ಚಸ್ಸು ಹೊಂದಿದ್ದಾರೆ. ಅವರಿಗೆ ಕಳಂಕ ತರಲು ಹಾಗೂ ಅವರ ಜನಪ್ರಿಯತೆ ಕುಗ್ಗಿಸಲು ಇಡಿ ದಾಳಿ ನಡೆಸಲಾಗಿದೆ ಎಂದು ದೂರಿದ್ದಾರೆ.
ಬಿಜೆಪಿಯವರು ಖರ್ಗೆ ಕುಟುಂಬದ ವಿರುದ್ಧ ಹೇಳಿಕೆ ಕೊಡುವುದಕ್ಕಾಗಿಯೇ ಛಲವಾದಿ ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದ್ದಾರೆ. ಛಲವಾದಿ ನಾರಾಯಣಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿರುವುದು ಆ ಪಕ್ಷದವರ ಕೀಳು ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.
ದಲಿತ ನಾಯಕರನ್ನು ಹತ್ತಿಕ್ಕುವ ಚಟುವಟಿಕೆಗಳನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.