ಲಿಂಗಾಯತ ಸಂಸ್ಕೃತಿ ನಾಶಕ್ಕೆ ಹುನ್ನಾರ

Akka 1
Published on

ಬೀದರ್: ಲಿಂಗಾಯತ ಸಂಸ್ಕೃತಿ ನಾಶಕ್ಕೆ ಹಲವು ವರ್ಷಗಳಿಂದ ಹುನ್ನಾರ ನಡೆದಿದ್ದು, ಲಿಂಗಾಯತರು ಎಚ್ಚೆತ್ತುಕೊಳ್ಳಬೇಕು ಎಂದು ವಿಜಯಪುರದ ಶರಣ ತತ್ವ ಚಿಂತಕ ಡಾ. ಜೆ.ಎಸ್. ಪಾಟೀಲ ಹೇಳಿದರು.

ಇಲ್ಲಿಯ ಬಸವಗಿರಿಯಲ್ಲಿ ಅಕ್ಕ ಅನ್ನಪೂರ್ಣತಾಯಿ ಪ್ರಥಮ ಸ್ಮರಣೊತ್ಸವದ ಎರಡನೇ ದಿನವಾದ ಶನಿವಾರ ನಡೆದ ಸಮವಸ್ತ್ರಧಾರಿ 770 ಶರಣ-ಶರಣೆಯರಿಂದ ಅಕ್ಕನ ಯೋಗಾಂಗ ತ್ರಿವಿಧಿ ಪಠಣ ಕಾರ್ಯಕ್ರಮದಲ್ಲಿ ‘ಲಿಂಗಾಯತ ಚಳವಳಿ ಐತಿಹಾಸಿಕ ಹಿನ್ನೆಲೆ’ ಕುರಿತು ಅವರು ಮಾತನಾಡಿದರು.

ಲಿಂಗಾಯತರು ಸಾಂಸ್ಕೃತಿಕ ದಬ್ಬಾಳಿಕೆಗಳಿಗೆ ಬಲಿಯಾಗಬಾರದು. ಅಸತ್ಯದ ವಿರುದ್ಧ ಹೊರಾಟ ನಡೆಸಬೇಕು ಎಂದು ತಿಳಿಸಿದರು.

ಸಂಸ್ಕøತಿಯ ಅರಿವಿಲ್ಲದಿದ್ದರೆ ಅನ್ಯ ಸಂಸ್ಕೃತಿ ದಾಸರಾಗಬೇಕಾಗುತ್ತದೆ. ಕಾರಣ, ಲಿಂಗಾಯತರು ತಮ್ಮ ಸಂಸ್ಕೃತಿ ಹಾಗೂ ಇತಿಹಾಸವನ್ನು ಅರಿಯಬೇಕು ಎಂದು ಹೇಳಿದರು.

ಲಿಂಗಾಯತರು ಉತ್ಕøಷ್ಟ ಸಂಸ್ಕೃತಿ ವಾರಸುದಾರರು. ಲಿಂಗಾಯತ ಚಳವಳಿ ಹುಟ್ಟಿದ್ದು ರಾಷ್ಟ್ರ ರಕ್ಷಣೆಗಾಗಿ. ಲಿಂಗಾಯತರು ರಾಷ್ಟ್ರೀಯ ವಾದಿಗಳು. ನಿಜವಾದ ದೇಶಭಕ್ತರು ಎಂದು ನುಡಿದರು.

ಇಷ್ಟಲಿಂಗ ಲಿಂಗಾಯತರ ದೇವರು. ಶೋಷಣಾ ಕೇಂದ್ರಗಳಿಂದ ದೂರವಿದ್ದು, ಶೋಷಣೆ ರಹಿತವಾದ ಇಷ್ಟಂಗವನ್ನು ಪೂಜಿಸಬೇಕು ಎಂದು ತಿಳಿಸಿದರು.

ಬಸವಣ್ಣ ಬಾರದಿದ್ದರೆ ನಾವೆಲ್ಲ ಶೋಷಿತರಾಗುತ್ತಿದ್ದೇವು. ನಡು ಬೀದಿಯಲ್ಲಿ ಓಡಾಡುವ ಹಾಗಿರಲಿಲ್ಲ. ಅಂದಿನ ಸಮಾಜದ ಸ್ಥಿತಿ-ಗತಿಗಳನ್ನು ಗಮನಿಸಿದ ಬಸವಣ್ಣ ಸರ್ವ ಶೋಷಣಾ ಮುಕ್ತ ಸಮಾಜ ಕಟ್ಟಲು ಹೋರಾಟ ಆರಂಭಿಸಿದರು. ಜಾತಿಯತೆಯನ್ನು ಹೋಗಲಾಡಿಸಿದರು. ಅವರ ಕಾಯಕ-ದಾಸೋಹ ತತ್ವ ಜಗದಲ್ಲಿ ಹೊಸ ಗಾಳಿ ಬೀಸಿತು ಎಂದು ತಿಳಿಸಿದರು.

ಹೈಕೋರ್ಟ್ ನ್ಯಾಯವಾದಿ ಸಂತೋಷ ಎಸ್. ನಾಗರಾಳೆ ಮಾತನಾಡಿ, ಅಕ್ಕ ಅವರದ್ದು ಅದ್ಭುತ ವ್ಯಕ್ತಿತ್ವ. ಯಾವಾಗಲೂ ನಗುತ್ತಲಿದ್ದರು. ಆನಂದ ಭಾವ ಅವರಲ್ಲಿತ್ತು. ಅನಾರೋಗ್ಯದ ಕಷ್ಟವಿದ್ದರೂ, ಹಸನ್ಮುಖಿಯಾಗಿರುತ್ತಿದ್ದರು ಎಂದು ಹೇಳಿದರು.

ಬಸವಗಿರಿಯನ್ನು ಸಾಧನೆಯ ಕೇಂದ್ರವಾಗಿ ಕಟ್ಟಿದರು. ನಾವು ಭಕ್ತರಾಗುವ ವಾತಾವರಣ ನಿರ್ಮಿಸಿ ಮೂಲ ಅರಿವಿಗೆ ಒಯ್ದರು ಎಂದು ತಿಳಿಸಿದರು.

ಬಸವಗಿರಿ ಅಕ್ಕ ಅನ್ನಪೂರ್ಣತಾಯಿ ಅವರ ಆತ್ಮ. ವಚನ ಪಠಣ, ಪರುಷ ಕಟ್ಟೆ, ವಚನ ವಿಜಯೋತ್ಸವದಲ್ಲಿ ಅಕ್ಕನವರು ಇದ್ದಾರೆ ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ್ದ ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಅಕ್ಕನವರಲ್ಲಿ ಧರ್ಮ ಪ್ರಸಾರದ ಅಪಾರ ಕಳಕಳಿ ಇತ್ತು. ನಾಡಿನಾದ್ಯಂತ ಅವರ ಪ್ರವಚನಗಳು ಜನಪ್ರಿಯವಾಗಿದ್ದವು. ಒಮ್ಮೆ ಅವರ ಪ್ರವಚನ ಕೇಳದವರು ಮತ್ತೆಂದೂ ತಪ್ಪಿಸುತ್ತಿರಲಿಲ್ಲ ಎಂದು ಹೇಳಿದರು.

ಬಸವಣ್ಣನವರ ಉದ್ದೇಶ ತತ್ವ ಸಂಘಟನೆಯಾಗಿತ್ತು. ಎಲ್ಲ ಜಾತಿಯವರಿಗೆ ಸಂಸ್ಕಾರ ನೀಡಿ ಲಿಂಗಾಯತರಾಗಿಸಿದ್ದರು. ಅನೇಕ ಬಸವ ತತ್ವ ಪ್ರಸಾರಕರಿಗೆ ಲಿಂಗಾನಂದರು ಪ್ರೇರಣೆಯಾಗಿದ್ದರು. ಅಕ್ಕನವರ ಕಣ ಕಣ, ರೋಮ ರೋಮಗಳಲ್ಲೂ ಬಸವಣ್ಣನೇ ತುಂಬಿದ್ದರು. ಅನ್ಯ ಆಚರಣೆಗಳಿಂದ ಬಸವ ತತ್ವಕ್ಕೆ ಕರೆ ತರುವಲ್ಲಿ ನಿಸ್ಸೀಮರಾಗಿದ್ದರು ಎಂದು  ತಿಳಿಸಿದರು.

ಅಕ್ಕನವರು ಬಹಳ ಸಮರ್ಥರಾದ ಪ್ರಭುದೇವ ಸ್ವಾಮೀಜಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಪ್ರಭುದೇವ ಸ್ವಾಮೀಜಿ ನೂರಾರು ಕಡೆ ಪ್ರವಚನ ಮಾಡಿದ್ದಾರೆ. ಬಸವ ಬೆಳಕು ವಿಸ್ತರಿಸಿದ್ದಾರೆ ಎಂದು ಹೇಳಿದರು.

‘ಅನ್ನಪೂರ್ಣ’ ಯೋಜನೆಗೆ ಚಾಲನೆ ನೀಡಿದ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಡಾ. ಗಂಗಾದೇವಿ ಮಾತನಾಡಿ, ಅಕ್ಕ ಅನ್ನಪೂರ್ಣತಾಯಿ ಹೆಸರಲ್ಲಿ ಹಸಿದವರಿಗೆ ಉಣ್ಣಿಸಲು ಅನ್ನಪೂರ್ಣ ಯೋಜನೆ ಆರಂಭಿಸಿರುವುದು ಸಂತೋಷದ ವಿಷಯ. ಇದೊಂದು ಮಾನವೀಯ ಕಾರ್ಯ. ಗುರುತರವಾದ ಜವಾಬ್ದಾರಿ ಎಂದು ಹೇಳಿದರು.

ಅನ್ನಪೂರ್ಣ ಯೋಜನೆ ಅಕ್ಕನವರಿಗೆ ನಿಜವಾದ ಗೌರವ ಸಮರ್ಪಣೆ ಎಂದರು.

ಭೂಮಿಯೊಳಗೆ ಬಿದ್ದ ಬೀಜ ಕೆಟ್ಟಿತೆನಬೇಡ. ಅಕ್ಕನವರು ಬಿತ್ತಿದ ಬೀಜ ಬೆಳೆ ನೀಡೇ ನೀಡುತ್ತವೆ. ಅಕ್ಕನ ಭಕ್ತರು ಆಚರಣೆಯಲ್ಲಿ ಗಟ್ಟಿ ಕಾಳಾಗಿದ್ದಾರೆ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ, ಡಾ. ವಚನಶ್ರುತಿ ಮಾತನಾಡಿದರು.

ಅಶ್ವಿನಿ ರಾಜಕುಮಾರ ಚಿಟ್ಟಾ ವಚನ ಸಂಗೀತ ಸುಶ್ರಾವ್ಯವಾಗಿ ನಡೆಸಿಕೊಟ್ಟರು. ಆಳಂದದ ಕೋರಣೇಶ್ವರ ಸ್ವಾಮೀಜಿ ಸಮ್ಮುಖ, ನೀಲಮ್ಮನ ಬಳಗದ ನೀಲಮ್ಮ ರೂಗನ್ ಅಧ್ಯಕ್ಷತೆ ವಹಿಸಿದ್ದರು.

ಖೇಳಗಿಯ ಶಿವಲಿಂಗ ಸ್ವಾಮೀಜಿ, ಕಲಬುರಗಿಯ ಮಾತೆ ಪ್ರಭುಶ್ರೀ, ನಿಡವಂಚಾದ ಮಾತೆ ಮೈತ್ರಾದೇವಿ, ಬೀದರ್‍ನ ಶರಣಮ್ಮ ತಾಯಿ ಅಲಿಯಾಬಾದ್‍ನ ಲಲಿತಾ ತಾಯಿ, ಅಕ್ಕ ಮಹಾದೇವಿ, ಕಮಲಾಬಾಯಿ ತಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net