

ಬೀದರ್: ಗ್ರಾಮ ಪಂಚಾಯಿತಿಗಳಲ್ಲಿನ ಕಡತ ನಾಪತ್ತೆ ಪ್ರಕರಣದಲ್ಲಿ ಪಿಡಿಒಗಳ ವಿರುದ್ಧ ಕ್ರಮ ಜರುಗಿಸದ ಕಾರಣಕ್ಕೆ ನಮ್ಮ ಕರ್ನಾಟಕ ಸೇನೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಯಾದವ್ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಜಿಲ್ಲೆಯ ಆರು ಪಿಡಿಒಗಳು ಕಾರ್ಯ ನಿರ್ವಹಿಸುತ್ತಿರುವ ಪಂಚಾಯಿತಿಗಳಲ್ಲಿ ಕಡತಗಳು ಇಲ್ಲ. ಹೀಗಾಗಿ ಉಪ ಕಾರ್ಯದರ್ಶಿಯಿಂದ ತನಿಖೆ ಮಾಡಿಸಬೇಕು. ಪಿಡಿಒಗಳಾದ ವಿಜಯಶೀಲಾ, ಶಂಕರರರಾವ್, ಅಬ್ದುಲ್ ಅಜೀಮ್ ಸಿದ್ದಿಕಿ, ಶಿವಕುಮಾರ ಪಾಟೀಲ, ಶರತಕುಮಾರ ಅಭಿಮಾನ, ಶ್ರೀಧರ ಹಾಗೂ ಭೀಮರಾವ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶಿಫಾರಸು ಮಾಡಿದ್ದರು. ಆದರೆ, ಈವರೆಗೆ ಪಿಡಿಒಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಸಂಘಟನೆಯ ಮನವಿ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಪರಿಶೀಲನೆ ನಡೆಸಿ, ವಾಸ್ತವಾಂಶದ ವರದಿ ಸಲ್ಲಿಸಲು ನಿರ್ದೇಶನ ನೀಡಿದ್ದಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರ ಪತ್ರಕ್ಕೂ ಬೆಲೆ ಕೊಟ್ಟಿಲ್ಲ ಎಂದು ಆಪಾದಿಸಿದ್ದಾರೆ.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.