

ಬೀದರ್: ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‍ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘ ಆಗ್ರಹಿಸಿದೆ.
ಸಂಘದ ಪದಾಧಿಕಾರಿಗಳು ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ 102 ಸರ್ಕಾರಿ ಪಾಲಿಟೆಕ್ನಿಕ್‍ಗಳಿದ್ದು, 1,600 ಅತಿಥಿ ಉಪನ್ಯಾಸಕರು ಇಪತ್ತು, ಹದಿನೈದು, ಹತ್ತು, ಐದು ಹಾಗೂ ಎರಡು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೀದರ್, ಔರಾದ್ ಸೇರಿ ಜಿಲ್ಲೆಯಲ್ಲಿ 45 ಅತಿಥಿ ಉಪನ್ಯಾಸಕರು ಇದ್ದಾರೆ ಎಂದು ಸಂಘದ ರಾಜ್ಯ ಅಧ್ಯಕ್ಷ ಪ್ರವೀಣಕುಮಾರ ಮೀರಾಗಂಜಕರ್ ಗಮನ ಸೆಳೆದರು.
ಅತಿಥಿ ಉಪನ್ಯಾಸಕರು ಪೂರ್ಣಾವಧಿ ಉಪನ್ಯಾಸಕರ ಖಾಲಿ ಹುದ್ದೆಗಳ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಟುಂಬ ನಿರ್ವಹಣೆಗೆ ಸೇವೆಯನ್ನೇ ಅವಲಂಬಿಸಿದ್ದಾರೆ. ಆದರೆ, ಪೂರ್ಣಾವಧಿ ಹುದ್ದೆಗೆ ಉಪನ್ಯಾಸಕರು ಹೊಸದಾಗಿ ನೇಮಕಗೊಂಡು ಅಥವಾ ವರ್ಗಾವಣೆಗೊಂಡು ಬಂದರೆ ಅತಿಥಿ ಉಪನ್ಯಾಸಕರು ಸೇವೆಯಿಂದ ಬಿಡುಗಡೆಗೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದರು.
ನೆರೆಯ ತೆಲಂಗಾಣ, ಮಹಾರಾಷ್ಟ್ರ, ಹರಿಯಾಣ ಮತ್ತಿತರ ರಾಜ್ಯಗಳಲ್ಲಿ ಅತಿಥಿ ಉಪನ್ಯಾಸಕರಿಗೆ ಬೇಸಿಕ್ ಸ್ಟೇಟ್ ಸ್ಕೇಲ್ ಹಾಗೂ ಸೇವಾ ಭದ್ರತೆ ಒದಗಿಸಲಾಗಿದೆ. ರಾಜ್ಯದಲ್ಲೂ ಸೇವಾ ಭದ್ರತೆ ಒದಗಿಸಬೇಕು ಎಂದು ಬೇಡಿಕೆ ಮಂಡಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೃಷ್ಣಕಾಂತ ವಿಶ್ವಕರ್ಮ, ಪ್ರಧಾನ ಕಾರ್ಯದರ್ಶಿ ಜಗದೀಶ್ ದೇಸಾಯಿ, ಪ್ರಮುಖರಾದ ಸಂತೋಷ್ ಲದ್ದೆ, ನಿತೀಶ್ ಕಾರಬಾರಿ, ಫಾತಿಮಾ, ನಜಮಾ ಆಫ್ರೀನ್, ಅಶ್ವಿನಿ ಸುನೀಲ್, ಸಂದೀಪ್ ಕುಲಕರ್ಣಿ, ಅವಿನಾಶ ಸೋಲಪುರಕರ್, ಸಚಿನ್ ಚಿಟಮೆ, ಜಗದೀಶ್ ದೇಸಾಯಿ, ಹುಸೇನ್ ಜಬೀನ್, ಶರಣಬಸಪ್ಪ ವಾಲಿ ಮತ್ತಿತರರು ಇದ್ದರು.