

ಭಾಲ್ಕಿ: ಮನುಷ್ಯ ಶಾಂತಿ, ನೆಮ್ಮದಿಯಿಂದ ಬದುಕು ಸಾಗಿಸಬೇಕು. ಆಸೆಗೆ ಕೊನೆಯಿಲ್ಲ ಎಂದು ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಶ್ರೀ ಡಾ.ಬಸವಲಿಂಗ ಅವಧೂತರು ಹೇಳಿದರು.
ಬೀರಿ(ಕೆ) ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ 12ನೇ ಅಖಂಡ ಸಪ್ತಾಹ ನಿಮಿತ್ತ ಏರ್ಪಡಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ದಾಸೋಹ ಭಾವ ಬೆಳೆಸಿಕೊಳ್ಳಬೇಕು. ಯಾವುದೇ ಕೆಲಸ ತೋರಿಕೆಗೆ ಮಾಡದೆ ಸತ್ಯದ ನೆಲೆಯನ್ನು ಕಂಡುಕೊಂಡು ಜೀವನ ಸಾರ್ಥಕ ಮಾಡಿಕೊಳ್ಳಿ ಎಂದು ಹಿತೋಪದೇಶ ನೀಡಿದರು.
ಬಸವಾದಿ ಶರಣರು ನಡೆದಾಡಿದ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಧನ್ಯರು. ಶರಣರು ರಚಿಸಿದ ವಚನ ಸಾಹಿತ್ಯ ಓದಿ ಸರಳ ಮಾರ್ಗ ಕಂಡುಕೊಳ್ಳಿ. ನಾಮಗಳು ಬೇರೆ ಬೇರೆ ಇದ್ದರೂ ದೇವರು ಒಬ್ಬನೇ. ಆತನ ಕೃಪೆಗೆ ಪಾತ್ರರಾಗಲು ಪೂಜೆ, ಧ್ಯಾನ ಮಾಡುತ್ತ ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳದೆ ಪರಸ್ಪರ ಪ್ರೀತಿಯಿಂದ ಬಾಳಬೇಕು ಎಂದು ಸಲಹೆ ಮಾಡಿದರು.
ದೇವಸ್ಥಾನ ಪೂಜಾರಿ ಅಮೃತಪ್ಪ ಸ್ವಾಮಿ, ದೇಗುಲ ಸಮಿತಿ ಅಧ್ಯಕ್ಷ ದತ್ತಾತ್ರಿ ಪಾಟೀಲ್, ಪ್ರಮುಖರಾದ ಶರಣಪ್ಪ ಪಾಟೀಲ್, ಗಂಗಶೆಟ್ಟೆಪ್ಪ ಖಾಜಾಪುರೆ, ಆನಂದ ಬಿರಾದಾರ್, ಧನರಾಜ ಮುರಾಳೆ, ಕಾಶೆಪ್ಪ ಪಟ್ನೆ, ತಾನಾಜಿ ಮದಕಟ್ಟೆ, ಧನರಾಜ ಹಣಮಶೆಟ್ಟೆ, ದಿಲೀಪ ಸ್ವಾಮಿ ಇತರರಿದ್ದರು.