

ಬೀದರ್: ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಮಾದಾರ ಚೆನ್ನಯ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ರಮೇಶ ಕಟ್ಟಿತೂಗಾಂವ ಆಗ್ರಹಿಸಿದ್ದಾರೆ.
ಖಂಡ್ರೆ ಕಲ್ಯಾಣ ಕರ್ನಾಟಕದ ಪ್ರಶ್ನಾತೀತ ನಾಯಕ. ಲಿಂಗಾಯತ ಸಮಾಜದ ನಾಯಕರಲ್ಲಿ ಯಡಿಯೂರಪ್ಪ ನಂತರ ಖಂಡ್ರೆ ಅವರನ್ನು ಕಾಣಬಹುದು. ಕಾಂಗ್ರೆಸ್‌ನ ನಿಷ್ಠಾವಂತ ಕಾರ್ಯಕರ್ತರಾಗಿರುವ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ರಾಜ್ಯದಲ್ಲಿ ಪಕ್ಷವನ್ನು ಇನ್ನುಷ್ಟು ಬಲಿಷ್ಠವಾಗಿ ಬೆಳೆಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಖಂಡ್ರೆ ಏಳಿಗೆ ಸಹಿಸದ ಕೆಲವರು ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಭಾಲ್ಕಿ ತಾಲೂಕಿನ ಖುದಂಪುರದಲ್ಲಿ ದಲಿತರ ಮೇಲಾದ ದೌರ್ಜನ್ಯಕ್ಕೆ ಒಂದೇ ದಿನದಲ್ಲಿ ನ್ಯಾಯ ಕೊಡಿಸಿದರು. ಜಿಲ್ಲೆಯ ವಿವಿಧೆಡೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಿದ ಕೀರ್ತಿ ಖಂಡ್ರೆ ಅವರಿಗೆ ಸಲ್ಲುತ್ತದೆ ಎಂದರು.
ಡಿಎಸ್ಎಸ್ (ಎನ್.ಮೂರ್ತಿ ಬಣ) ಜಿಲ್ಲಾಧ್ಯಕ್ಷ ಹರಿಹರ ಗೋಖಲೆ, ಡಾ.ಬಾಬು ಜಗಜೀವನರಾಮ ಸೇವಾ ಸಂಘದ ಅಧ್ಯಕ್ಷ ಯುವರಾಜ ಭೆಂಡೆ, ಸಮಾಜದ ಮುಖಂಡರಾದ ಮಹೇಶ ಹಿರೇಮನಿ, ಸಂಜಯ ಲಂಜವಾಡ, ಸಂಜು ಉಜನಿ, ಪಪ್ಪುರಾಜ ನೇಳಗೆ, ಸತೀಶ್ ಮಾನೆ, ನಾಗರಾಜ, ಮಲ್ಲಿಕಾರ್ಜುನ ಭಾವಿದೊಡ್ಡಿ, ಶಿವಕಾಂತ ಭೋಸಗಾ, ರೋಹಿತ ಕಟ್ಟಿತೂಗಾಂವ ಇದ್ದರು.