ಪವರ್ ಗ್ರಿಡ್ ನಿಂದ ಸರ್ವಾಂಗೀಣ ಅಭಿವೃದ್ಧಿ

Chimmegaon
Published on

ಕಮಲನಗರ: ಸೋಲಾರ್ ಪವರ್ ಗ್ರಿಡ್ ಪ್ರಾರಂಭವಾದ ಮೇಲೆ ಈ ಭಾಗ ಸಂಪೂರ್ಣ ಅಭಿವೃದ್ಧಿಯಾಗಲಿದೆ. ಇಲ್ಲಿಯ ಭೂಮಿಗೆ ಒಳ್ಳೆಯ ಬೆಲೆ ಸಿಗಲಿದೆ ಹಾಗೂ ರೈತರ ಜೀವನ ಹಸನಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಹೇಳಿದರು.

ತಾಲೂಕಿನ ಚಿಮ್ಮೆಗಾಂವ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, 2300 ಕೋಟಿ ರೂ. ಅನುದಾನದಲ್ಲಿ ಕೇಂದ್ರ ನೂತನ ಹಾಗೂ ನವಿಕರಿಸಬಹುದಾದ ಇಂಧನ ಮೂಲ ಸಚಿವಾಲಯದ ಪವರ್ ಗ್ರಿಡ್ ಕಾರ್ಪೋರೇಷನ್ ಮೂಲಕ ನಿರ್ಮಾಣವಾಗುತ್ತಿರುವ ಈ ಕೇಂದ್ರ ದಕ್ಷಿಣ ಭಾರತದಲ್ಲೇ ಅತಿ ದೊಡ್ಡದಾದ 2500 ಮೆಗಾ ವ್ಯಾಟ್ ವಾಗಿದೆ ಎಂದರು.

ಕಳೆದ ಬಾರಿ ಕೇಂದ್ರದಲ್ಲಿ ಇದೇ ಖಾತೆಯ ಸಚಿವನಾಗಿದ್ದಾಗ, ಔರಾದ್ ತಾಲೂಕಿನ ಬರುಡು ಭೂಮಿಯಲ್ಲಿ ಈ ಯೋಜನೆಗಳು ತಂದರೆ ರೈತರು, ನಿರುದ್ಯೋಗಿಗಳು, ಯುವಕರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಈ ಯೋಜನೆ ಮಂಜೂರಿ ಮಾಡಿಸಿದ್ದೆ, 2026ರ ಫೆಬ್ರವರಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಈ ಪವರ್ ಗ್ರಿಡ್ ನಿಂದ ಸದ್ಯ 2500 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯಾಗಲಿದೆ. ನಂತರ ಒಟ್ಟು 5000 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಗುರು ಇದೆ. ಈಗಾಗಲೇ ಈ ಪವರ್ಗ್ರಿಡ್ ಸುತ್ತಮುತ್ತ 8-10 ಕಿ.ಮೀ. ಒಳಗೆ ವಿವಿಧ ಸೋಲಾರ್ ಪವರ್ ಪ್ಲ್ಯಾಂಟ್ ಹಾಕಲು ಉದ್ಯಮಿಗಳು ಮುಂದೆ ಬರುತ್ತಿದ್ದು, ಅಂದಾಜು 10 ಸಾವಿರ ಕೋಟಿ ಹೊಸ ಹೂಡಿಕೆ ಬರಲಿದೆ. ಇದರಿಂದ ರೈತರ ಬರುಡು ಭೂಮಿಗೆ ಉತ್ತಮ ಬೆಲೆ ಸಿಗಲಿದೆ. ಆದಾಯ ಹೆಚ್ಚಾಗುತ್ತದೆ ಮತ್ತು ಕಾರ್ಮಿಕರು, ನಿರುದ್ಯೋಗಿಗಳಿಗೆ ಕೆಲಸ ಸಿಗಲಿದೆ ಎಂದು ತಿಳಿಸಿದರು.

164 ಎಕರೆ ಭೂಮಿಯಲ್ಲಿ ಈ ಯೋಜನೆ ನಡೆಯುತ್ತಿದ್ದು, 3ರಿಂದ 4 ಲಕ್ಷ ರೂ. ಪ್ರತಿ ಎಕರೆಗೆ ಮಾರುತ್ತಿದ್ದ ಹೊಲಗಳು ಈಗ ಎಕರೆಗೆ 27 ಲಕ್ಷ ರೂ. ನೀಡಿ ಪವರ್ಗ್ರಿಡ್ ಕಾರ್ಪೋರೇಷನ್ ಅವರು ಖರೀದಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು 5000 ಎಕರೆ ಭೂಮಿ ಅವಶ್ಯಕವಾಗಿದ್ದು, ರೈತರು ಮುಂದೆ ಬಂದರೆ ಇನ್ನು ಹೆಚ್ಚಿನ ಸೋಲಾರ್ ಪ್ಲ್ಯಾಂಟ್ ಗಳು ಇಲ್ಲಿ ತಲೆ ಎತ್ತಲಿವೆ ಎಂದು ಹೇಳಿದರು.

ಮುಖಂಡರಾದ ರಮಾಕಾಂತ ದೇಶಮುಖ, ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘೂಳೆ, ರಮೇಶ ಬಿರಾದಾರ್, ಚಂದ್ರಶೇಖರ ದೇಶಮುಖ, ಸಂತೋಷ ಪಾಟೀಲ್, ನಾರಾಯಣ ಪಾಟೀಲ್, ಯೋಜನಾ ಅಧಿಕಾರಿಗಳಾದ ವಿ.ಗಣೇಶ, ಸಾಯಿಬಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net