

ಬೀದರ್: ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠವು ಮೇ 23 ಮತ್ತು 24 ರಂದು ಅಕ್ಕ ಅನ್ನಪೂರ್ಣತಾಯಿ ಅವರ ಪ್ರಥಮ ಸ್ಮರಣೋತ್ಸವ ಹಮ್ಮಿಕೊಳ್ಳಲು ನಿರ್ಣಯಿಸಿದೆ.
ಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ಈ ಕುರಿತು ಸರ್ವ ಸಮ್ಮತಿಯ ತೀರ್ಮಾನ ಕೈಗೊಳ್ಳಲಾಯಿತು.
ಮೇ 23 ರಂದು ಬೆಳಿಗ್ಗೆ 7.30ಕ್ಕೆ ಸಾಮೂಹಿಕ ವಚನ ಪಾರಾಯಣ ಮತ್ತು ಅನುಭಾವ ಗೋಷ್ಠಿ, ಸಂಜೆ 5ಕ್ಕೆ ಉದ್ಘಾಟನಾ ಸಮಾರಂಭ, ಮೇ 24 ರಂದು ಬೆಳಿಗ್ಗೆ 8.30ಕ್ಕೆ ಪಾಪನಾಶ ಗೇಟ್‍ನಿಂದ ಬಸವಗಿರಿ ವರೆಗೆ ವಚನ ವಿಜಯೋತ್ಸವ ಪಥ ಸಂಚಲನ, ಬೆಳಿಗ್ಗೆ 11ಕ್ಕೆ ಅಕ್ಕನವರ ಸ್ಮರಣೋತ್ಸವ ಹಾಗೂ ಯೋಗಾಂಗ ತ್ರಿವಿಧಿ ಸಾಮೂಹಿಕ ಪಠಣ, ಸಂಜೆ 4.30ಕ್ಕೆ ಅನುಭಾವ ಹಾಗೂ ಸಮಾರೋಪ ಸಮಾರಂಭ ಆಯೋಜಿಸಲು, ನಾಡಿನ ಮಠಾಧೀಶರು, ಗಣ್ಯರು, ಚಿಂತಕರು ಹಾಗೂ ಅನುಭಾವಿಗಳನ್ನು ಆಮಂತ್ರಿಸಲು ನಿರ್ಧರಿಸಲಾಯಿತು.
ಸ್ಮರಣೋತ್ಸವದಲ್ಲಿ ಬೀದರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಐದು ಸಾವಿರಕ್ಕೂ ಹೆಚ್ಚು ಶರಣ-ಶರಣೆಯರು, ಅಕ್ಕನವರ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ತಿಳಿಸಿದರು.
ಸ್ಮರಣೋತ್ಸವದಲ್ಲಿ ಎರಡೂ ದಿನ ಭಕ್ತರಿಗೆ ನಿರಂತರ ಪ್ರಸಾದ ವ್ಯವಸ್ಥೆ ಇರಲಿದೆ ಎಂದು ಹೇಳಿದರು.
ಈಗಿನಿಂದಲೇ ಸ್ಮರಣೋತ್ಸವ ಪ್ರಚಾರ ಕಾರ್ಯ ಆರಂಭಿಸಲಾಗುವುದು. ಒಂದು ಸಾವಿರಕ್ಕೂ ಅಧಿಕ ಶರಣೆಯರು ಒಂದೇ ತೆರನಾದ ವಸ್ತ್ರ ಧರಿಸಿ ಸಾಮೂಹಿಕ ಯೋಗಾಂಗ ತ್ರಿವಿಧಿ ಪಠಿಸಲಿದ್ದಾರೆ ಎಂದು ತಿಳಿಸಿದರು.
ಅಕ್ಕ ಅನ್ನಪೂರ್ಣತಾಯಿ ಅವರು ಅಗಲಿ ಒಂದು ವರ್ಷವಾಗುತ್ತಿದೆ. ಅವರ ಜೀವನ ಹಾಗೂ ಸಾಧನೆಗಳನ್ನು ಯುವ ಪೀಳಿಗೆಗೆ ತಿಳಿಸಿ, ಆದರ್ಶ ಬದುಕಿಗೆ ಪ್ರೇರಣೆ ನೀಡಲು ಅಕ್ಕನವರ ಸ್ಮರಣೋತ್ಸವ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಾಹಿತಿ ರಮೇಶ ಮಠಪತಿ ತಿಳಿಸಿದರು.
ಅಕ್ಕ ಅನ್ನಪೂರ್ಣತಾಯಿ ಬಸವ ಧರ್ಮದ ಮರೆಯಲಾಗದ ಮಾಣಿಕ್ಯ. ಬಸವ ತತ್ವ ಪ್ರಸಾರಕ್ಕೆ ನಾಲ್ಕು ದಶಕ ಸವೆಸಿದ ಅಪೂರ್ವ ಪ್ರವಚನಕಾರರು. ದೇಶ, ವಿದೇಶದಲ್ಲಿ ಪ್ರವನಗೈದು ಜಿಲ್ಲೆಗೆ ಕೀರ್ತಿ ತಂದವರು. ವಚನ ವಿಜಯೋತ್ಸವದಂಥ ಮಹತ್ವದ ಕಾರ್ಯಕ್ರಮ ರೂಪಿಸಿದವರು. ಲಿಂಗಾಯತ ಧರ್ಮಗ್ರಂಥ ಅವರ ವಿಶೇಷ ಕೊಡುಗೆಯಾಗಿದೆ ಎಂದು ಹೇಳಿದರು.
ಪ್ರಮುಖರಾದ ಶಾಂತಕುಮಾರ ಪನಸಾಲೆ, ಭಕ್ತರಾಜ ಖಂಡ್ರೆ, ಹಾವಯ್ಯ ಸ್ವಾಮಿ, ಓಂಕಾರ ಬಿರಾದಾರ, ಮಹೇಶ ಬಿರಾದಾರ, ವಿಜಯಕುಮಾರ ಬಾಬಣೆ, ರಮೇಶ ಪಾಟೀಲ, ನೆಹರೂ ಬಿರಾದಾರ, ಹಣ್ಮುಪಾಜಿ, ಲಿಂಗಾಯತ ಸೇವಾ ದಳದ ಸದಸ್ಯರು ಹಾಗೂ ನೀಲಮ್ಮನ ಬಳಗದ ಸಹೋದರಿಯರು ಇದ್ದರು.
ಪರುಷ ಕಟ್ಟೆಯ ಚನ್ನಬಸವಣ್ಣ ಪ್ರಾರ್ಥನೆಗೈದರು. ರೇವಣಪ್ಪ ಮೂಲಗೆ ವಚನ ಗಾಯನ ಮಾಡಿದರು. ಚನ್ನಬಸಪ್ಪ ಹಂಗರಗಿ ಸ್ವಾಗತಿಸಿದರು. ಶಿವಕುಮಾರ ಪಾಖಾಲ್ ವಂದಿಸಿದರು.
ಯಶಸ್ವಿಗೆ ವಿವಿಧ ಸಮಿತಿ ರಚನೆ
ಅಕ್ಕ ಅನ್ನಪೂರ್ಣತಾಯಿ ಸ್ಮರಣೋತ್ಸವದ ಯಶಸ್ವಿಗೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಹಣಕಾಸು ಸಮಿತಿ: ಸಿ.ಎಸ್. ಪಾಟೀಲ, ಸಿ.ಎಸ್. ಗಣಾಚಾರಿ, ಅಶೋಕ ಎಲಿ, ಚನ್ನಬಸಪ್ಪ ಹಂಗರಗಿ, ಮಲ್ಲಿಕಾರ್ಜುನ ಔರಾದೆ, ಬಾಬುರಾವ್ ಕಲಾಲ್, ಅಣವೀರ ಕೊಡಂಬಲ್, ನೀಲಮ್ಮ ರೂಗನ್, ಸಂಗೀತಾ ಚನ್ನಬಸಯ್ಯ. ಸಭಾ ಮಂಟಪ ಮತ್ತು ವೇದಿಕೆ ಸಮಿತಿ: ಪ್ರಕಾಶ ಮಠಪತಿ, ಆರ್.ಕೆ. ಪಾಟೀಲ, ಆನಂದ ವಡ್ಡನಕೇರಿ, ಬಸವರಾಜ ಶೇರಿಕಾರ್, ಸೂರ್ಯಕಾಂತ ಬಿರಾದಾರ, ಸಚ್ಚಿದಾನಂದ. ವಚನ ವಿಜಯೋತ್ಸವ ಪಥ ಸಂಚಲನ ಸಮಿತಿ: ರಾಜಕುಮಾರ ಪಾಟೀಲ, ಮಾಣಿಕಪ್ಪ ಗೋರನಾಳೆ, ಸಂತೋಷ್ ಪಟವಾರಿ, ಲಿಂಗಾನಂದ ಹಂಗರಗಿ. ಪ್ರಸಾದ ಸಮಿತಿ: ಚಂದ್ರಶೇಖರ ಹೆಬ್ಬಾಳೆ, ಅಮೃತ ಚಿಮಕೋಡೆ, ವೈಜಿನಾಥ ಹುಣಸಗೇರಿ.