

ಬೀದರ್: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಹಾಡಹಗಲೇ ಕಳ್ಳತನ, ದರೋಡೆ, ಕೊಲೆಗಳಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಆರೋಪಿಸಿದರು.
ಜಿಲ್ಲಾದ್ಯಂತ ನಡೆದಿರುವ ನಿರಂತರ ಘಟನೆಗಳನ್ನು ಗಮನಿಸಿದರೆ ಸರ್ಕಾರಿ ಪ್ರಾಯೋಜಿತ ಎಂಬ ಅನುಮಾನ ಮೂಡುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಸಚಿನ್ ಪಾಂಚಾಳ ಆತ್ಮಹತ್ಯೆ, ಎಟಿಎಂ ದರೋಡೆ, ಹಲವು ಮನೆ ಕಳ್ಳತನ ಸೇರಿ ವಿವಿಧ ಪ್ರಕರಣಗಳು ನಡೆಯುತ್ತಿವೆ. ಮನೆ ಕಳ್ಳತನ ಪ್ರಕರಣದಲ್ಲಿ ಹೆಚ್ಚು ಬಂಗಾರ ಕಳವಾದರೆ ಎಫ್ಐಆರ್ನಲ್ಲಿ ಕಡಿಮೆ ಬಂಗಾರ ಬರೆಸುವಂತೆ ಪೊಲೀಸರು ಸಂತ್ರಸ್ತರಿಗೆ ಹೇಳುತ್ತಿದ್ದಾರೆ. ಹೀಗಾದರೆ ಉಳಿದ ಬಂಗಾರ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು.
ಜಿಲ್ಲೆಗೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳ ಅಗತ್ಯವಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೂಡಲೇ ಬದಲಾವಣೆ ಮಾಡಿ. ಇಷ್ಟೆಲ್ಲ ದುರ್ಘಟನೆಗಳು ನಡೆಯುತ್ತಿದ್ದರೂ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಕೇಂದ್ರ ಗೃಹ ಸಚಿವರ ರಾಜೀನಾಮೆ ಕೇಳುತ್ತಿದ್ದಾರೆ. ನೀವೇಕೆ ರಾಜೀನಾಮೆ ನೀಡಬಾರದು ಎಂದು ಪ್ರಶ್ನಿಸಿದರು.
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಮಾತನಾಡಿ, ಕಳ್ಳರು, ದರೋಡೆಕೋರರು, ಭ್ರಷ್ಟ ಅಧಿಕಾರಿಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಜನರನ್ನು ರಕ್ಷಿಸಬೇಕು. ನೀವು ಶಾಸಕರಾಗಿದ್ದಾಗ ಭಾಲ್ಕಿಗೆ ಸೀಮಿತವಾಗಿದ್ದ ದರೋಡೆ, ಕಳವು ಪ್ರಕರಣಗಳು ಸಚಿವರಾದ ಬಳಿ ಇಡೀ ಜಿಲ್ಲೆಗೆ ವ್ಯಾಪಿಸಿವೆ ಎಂದರು.
ಮನವಿ ಕೊಡುವವರ ವಿರುದ್ಧವೇ ಕೇಸ್ ದಾಖಲಿಸುತ್ತಿರುವುದಕ್ಕೆ ಉಸ್ತುವಾರಿ ಸಚಿವರೇ ನೇರ ಹೊಣೆ. ವಕ್ ತಿದ್ದುಪಡಿ ಕಾಯ್ದೆ ವಿರುದ್ಧ ಪೌರಾಡಳಿತ ಸಚಿವ ರಹೀಮ್ ಖಾನ್ ಪ್ರತಿಭಟನೆ ನಡೆಸಿದ್ದನ್ನು ಖಂಡಿಸಿದ ಖೂಬಾ, ಬಡ ಮುಸ್ಲಿಮರು ಮತ್ತು ಹಿಂದುಗಳ ಆಸ್ತಿ ರಕ್ಷಣೆಗಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಅದನ್ನು ಸಚಿವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪಾಕಿಸ್ತಾನದ ಮೇಲೆ ಯುದ್ಧ ಸಾರುವ ಅಗತ್ಯವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡನೀಯ. ತುಷ್ಟೀಕರಣ ನೀತಿ ಬಿಟ್ಟು ಸಿದ್ದರಾಮಯ್ಯ ಅವರು ಇಸ್ಲಾಂ ಧರ್ಮ ಸ್ವೀಕರಿಸುವುದು ಉತ್ತಮ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪೀರಪ್ಪ ಔರಾದೆ, ಕಿರಣ ಪಾಟೀಲ್, ನಗರಸಭೆ ಸದಸ್ಯ ಶಶಿ ಹೊಸಳ್ಳಿ, ಪ್ರಮುಖರಾದ ರಾಜಶೇಖರ ನಾಗಮೂರ್ತಿ, ಸಂತೋಷರಡ್ಡಿ ಆಣದೂರ, ಬಸವರಾಜ ಪವಾರ್, ವೀರು ದಿಗ್ವಾಲ್ ಇತರರಿದ್ದರು.