

ಭಾಲ್ಕಿ: ಗ್ರಾಮೀಣ ಭಾಗದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸಿ ಗುಣಾತ್ಮಕ, ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಭಾಲ್ಕಿ ಹಿರೇಮಠ ಸಂಸ್ಥಾನ ಶೈಕ್ಷಣಿಕ ಕ್ರಾಂತಿ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಇಂದಿನ ಮಕ್ಕಳಲ್ಲಿ ಜ್ಞಾನದ ಕೊರತೆ ಇಲ್ಲ. ಸಕಾಲದಲ್ಲಿ ಸೂಕ್ತ ಮಾರ್ಗದರ್ಶನ, ಸಂಸ್ಕಾರ, ಪ್ರೋತ್ಸಾಹ ದೊರೆತಲ್ಲಿ ಶೈಕ್ಷಣಿಕವಾಗಿ ಉನ್ನತ ಮಟ್ಟದಲ್ಲಿ ಸಾಧನೆಗೈಯಲು ಸಾಧ್ಯ ಎಂಬುದನ್ನು ಗುರುಕುಲದ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಗ್ರಾಮೀಣ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಿ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಗಮನ ಸೆಳೆಯುವಂಥ ಪ್ರದರ್ಶನ ನೀಡುತ್ತಿರುವುದು ತುಂಬ ಸಂತಸದ ವಿಷಯ. ಪ್ರತಿವರ್ಷ ನೀಟ್, ಜೆಇಇ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗುರುಕುಲ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ನಾನಾ ಜಿಲ್ಲೆ ಮಕ್ಕಳು ಗುರುಕುಲ ಕಡೆ ಬರುತ್ತಿದ್ದಾರೆ ಎಂದು ಹೇಳಿದರು.
ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಹಳ್ಳಿ ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿರುವುದು ನಮ್ಮ ಕಾಲೇಜಿನಲ್ಲಿ ದೊರೆಯುತ್ತಿರುವ ಗುಣಾತ್ಮಕ ತರಬೇತಿ, ಶಿಕ್ಷಣಕ್ಕೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದರು.
ಹಿರೇಮಠದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಸಂಸ್ಥೆ ನಿರ್ದೇಶಕ ಶಶಿಧರ ಕೋಸಂಬೆ, ಆಡಳಿತಾಧಿಕಾರಿ ಮೋಹನರಡ್ಡಿ, ಸಂಗಮೇಶ್ವರ ಕಾಲೇಜಿನ ಸ್ಥಾನಿಕ ಕಮಿಟಿ ಅಧ್ಯಕ್ಷ ಧನರಾಜ ಬಂಬುಳಗೆ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ, ಅನೀಲ ಹಾಲಕೂಡೆ, ನಾಗೇಶ ಕಮಲನಗರ ಇತರರಿದ್ದರು.
ಸನ್ಮಾನಿತ ಸಾಧಕರ ವಿವರ
ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಅಪ್ರತಿಮ ಸಾಧನೆ ತೋರಿದ ವಿದ್ಯಾರ್ಥಿ ಅಭಿಷೇಕ್ ಶಂಕರ ಬಿರಾದಾರ್ 99.78 ಪಸರ್ೆಂಟೈಲ್, ಸುಮಿತ್ ರಾಜೇಂದ್ರ 99.54, ಶಿವಕುಮಾರ ಜಗನ್ನಾಥ 99.42, ಗಣೇಶ ಬಾಲಾಜಿ 99.41, ಪ್ರದ್ಯುಮ್ನ ಪಂಢರಿನಾಥ 99.28, ಅಭಿಷೇಕರಡ್ಡಿ ವೆಂಕಟರಡ್ಡಿ 99.25, ಅಸ್ಮಿತಾ ರಾಮ 99.23, ಗುಂಡಪ್ಪ ಮಾರುತಿ 99.23, ಶಶಾಂಕ ಭೀಮಶಾ 99.21, ಸಂಕಲ್ಪ ಸುಭಾಷ 99.18, ಸುಜಲ್ ದೀಪಕ 99.09 ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.