ಡಿಪ್ಲೊಮಾ ನರ್ಸಿಂಗ್ ಹಾಸ್ಟೆಲ್ ನಿರ್ಮಾಣಕ್ಕೆ ಕ್ರಮ

Nursing School
Published on

ಬೀದರ್: ನಗರದಲ್ಲಿ ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ಸರ್ಕಾರಿ ನರ್ಸಿಂಗ್ ಶಾಲೆಯಲ್ಲಿ ನಡೆದ ಸರ್ಕಾರಿ ನರ್ಸಿಂಗ್ ಸ್ಕೂಲ್‍ನ 9ನೇ ಬ್ಯಾಚ್ ಹಾಗೂ ಬ್ರಿಮ್ಸ್ ಶುಶ್ರೂಷಾ ಕಾಲೇಜಿನ 3ನೇ ಬ್ಯಾಚ್ ವಿದ್ಯಾರ್ಥಿಗಳ ಪ್ರತಿಜ್ಞಾ ಬೋಧನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಎಸ್ಸಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳ ವಸತಿ ನಿಲಯ ಈಗಾಗಲೇ ನಿರ್ಮಿಸಲಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿ ವಸತಿ ನಿಲಯವನ್ನೂ ನಿರ್ಮಿಸಬೇಕು ಎಂಬ ಸರ್ಕಾರಿ ನರ್ಸಿಂಗ್ ಸ್ಕೂಲ್ ಹಾಗೂ ಬ್ರಿಮ್ಸ್ ಶುಶ್ರೂಷಾ ಕಾಲೇಜು ಪ್ರಾಚಾರ್ಯ ರಾಜಕುಮಾರ ಮಾಳಗೆ ಅವರ ಮನವಿಗೆ ಸ್ಪಂದಿಸಿ ಈ ಭರವಸೆ ನೀಡಿದರು.

ವರ್ಷದ ಒಳಗೆ ವಸತಿ ಗೃಹ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ರೋಗಿಗಳ ವೈದ್ಯಕೀಯ ಸೇವೆಯಲ್ಲಿ ಶುಶ್ರೂಷಕರ ಪಾತ್ರ ಬಹಳ ಮಹತ್ವದ್ದಾಗಿದೆ.  ಕೋವಿಡ್ ವೇಳೆ ಶುಶ್ರೂಷಕರು ಜೀವದ ಹಂಗು ತೊರೆದು ಜನರ ಪ್ರಾಣ ಉಳಿಸಿದ್ದನ್ನು ಮರೆಯಲಾಗದು ಎಂದು ತಿಳಿಸಿದರು.

ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಮಾತನಾಡಿ, ಶುಶ್ರೂಷಕರ ವೃತ್ತಿ ಬಹಳ ಶ್ರೇಷ್ಠವಾಗಿದೆ. ರೋಗಿಗಳ ಆರೈಕೆ ಮಾನವೀಯ ಸೇವೆಯಾಗಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ರಾಜಕುಮಾರ ಮಾಳಗೆ ಮಾತನಾಡಿ, ಸರ್ಕಾರಿ ನರ್ಸಿಂಗ್ ಸ್ಕೂಲ್ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಖಾಸಗಿ ಸ್ಕೂಲ್‍ಗಳಲ್ಲಿ ಬಹಳಷ್ಟು ಶುಲ್ಕ ಇದೆ. ಇಲ್ಲಿ ಅತ್ಯಂತ ಕಡಿಮೆ ಶುಲ್ಕವಿದ್ದು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದು ತಿಳಿಸಿದರು.

ಬಿ.ಎಸ್ಸಿ. ನರ್ಸಿಂಗ್ ಹಾಗೂ ಡಿಪ್ಲೊಮಾ ನರ್ಸಿಂಗ್ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಗಳು ವಿಪುಲವಾಗಿವೆ ಎಂದು ಹೇಳಿದರು.

ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಾಸಿಕ ರೂ. 1,500 ಶಿಷ್ಯವೇತನ ಇದೆ. ಬೆಲೆ ಏರಿಕೆ ದಿನಮಾನಗಳಲ್ಲಿ ಇದನ್ನು ರೂ. 3,000ಕ್ಕೆ ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದರು.

ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಬ್ರಿಮ್ಸ್ ನಿರ್ದೇಶಕ ಡಾ. ಶಿವಕುಮಾರ ಶೆಟಕಾರ್, ವೈದ್ಯಕೀಯ ಅಧೀಕ್ಷಕ ಡಾ. ಶಿವಯೋಗಿ ಬಾಲಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮೊಹಮ್ಮದ್ ಅಹ್ಮದೊದ್ದಿನ್, ಇಮ್ಯಾನುವೆಲ್ ಕೊಡ್ಡಿಕರ್ ಉಪಸ್ಥಿತರಿದ್ದರು.

ಸಂಜುಕುಮಾರ ಪಾಟೀಲ ಸ್ವಾಗತಿಸಿದರು. ಪ್ರಕಾಶ ಮಹಿಮಾಕರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net