

ಬೀದರ್: ದಕ್ಷಿಣ ವಿಧಾನಸಭೆ ಕ್ಷೇತ್ರದ ಚಿಟ್ಟಾ ಕ್ರಾಸ್ ನಿಂದ ಚಿಟ್ಟಾ ಗ್ರಾಮಕ್ಕೆ ಸಂಪರ್ಕಿಸುವ ಐದು ಕೋಟಿ ರೂ. ವೆಚ್ಚದ ಸುಸಜ್ಜಿತ ದ್ವಿಪಥ ರಸ್ತೆ ಕಾಮಗಾರಿಗೆ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಿದರು.
ಚಿಟ್ಟಾ ಕ್ರಾಸ್ ನಿಂದ ಚಿಟ್ಟಾವರೆಗಿನ ಒಂದು ಕಿಲೋಮೀಟರ್ ರಸ್ತೆ ಅಗಲಗೊಳಿಸಿ ದ್ವಿಪಥವಾಗಿ ಅಭಿವೃದ್ಧಿಪಡಿಸಬೇಕು ಎಂಬ ಸ್ಥಳೀಯರ ಮುಖ್ಯ ಬೇಡಿಕೆಗೆ ಸ್ಪಂದಿಸಿ ಕಾಮಗಾರಿ ಆರಂಭಿಸಲಾಗಿದೆ. ಉತ್ತಮ ದ್ವಿಪಥ ರಸ್ತೆ ಜತೆಗೆ ಮಧ್ಯೆ ಡಿವೈಡರ್(ವಿಭಜಕ), ಎರಡೂ ಕಡೆ ಬೆಳಗುವ ರಸ್ತೆ ವಿಭಜಕಗಳಲ್ಲಿ ಸಾಲು ವಿದ್ಯುತ್ ಬೀದಿ ದೀಪಗಳು ಈ ಮಾರ್ಗದ ಸುಂದರೀಕರಣ ಹೆಚ್ಚಿಸಲಿವೆ ಎಂದು ಬೆಲ್ದಾಳೆ ಹೇಳಿದರು.
ಬೀದರ್ ನಿಂದ ದಕ್ಷಿಣ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಈ ಭಾಗ ನಗರದ ಹಲವು ವಿಸ್ತರಣೆ ಬಡಾವಣೆಗೂ ಸಂಪರ್ಕಿಸುವ ಕಾರಣಕ್ಕೆ ವಾಹನ ದಟ್ಟಣೆ ಹೆಚ್ಚಾಗಿದೆ. ಈ ಮುಂಚೆ ಚಿಕ್ಕ ರಸ್ತೆಯಿದ್ದು, ಹಾಳಾಗಿದ್ದರಿಂದ ಅಪಘಾತಗಳು ಸಂಭವಿಸುತ್ತಿದ್ದವು. ಇದಕ್ಕೆಲ್ಲ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಹೈಟೆಕ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಕಾಲಮಿತಿಯೊಳಗೆ ಉತ್ತಮ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮಳೆಯಾದರೆ ಈ ಮಾರ್ಗದ ವಿವಿಧೆಡೆ ನೀರು ಸಂಗ್ರಹವಾಗಿ ವಾಹನ ಸವಾರರು, ಸಾರ್ವಜನಿಕರು ಪರದಾಡುವಂಥ ಸ್ಥಿತಿಯಿದೆ. ಇದಕ್ಕೂ ಪರಿಹಾರ ಕಲ್ಪಿಸಲು ಒಂದು ಕೋಟಿ ವೆಚ್ಚದಲ್ಲಿ ಸಣ್ಣ ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಈ ಕೆಲಸ ಶುರುವಾಗಲಿದೆ ಎಂದು ತಿಳಿಸಿದರು.
ನನಗೆ ರಾಜಕೀಯ ಜನ್ಮ ಕೊಟ್ಟ ಗ್ರಾಮ ಚಿಟ್ಟಾ. ಈ ಕ್ಷೇತ್ರದ ಜನರು ಮೊದಲ ಬಾರಿ ಜಿಪಂ ಸದಸ್ಯನಾಗಿ ಆಯ್ಕೆ ಮಾಡಿ ಸಾರ್ವಜನಿಕ ಸೇವೆಗೆ ಅವಕಾಶ ಕಲ್ಪಿಸಿದರು. ತಾಯಿ ಶಕುಂತಲಾ ಬೆಲ್ದಾಳೆ ಸಹ ಇಲ್ಲಿಂದ ಜಿಪಂ ಸದಸ್ಯರಾಗಿದ್ದು ಸ್ಮರಣೀಯ. ಎಲ್ಲರ ಆಶೀರ್ವಾದದಿಂದ ಕ್ಷೇತ್ರದ ಶಾಸಕನಾಗಿ ಸೇವೆಯಲ್ಲಿ ತೊಡಗಿದ್ದೇನೆ. ಚಿಟ್ಟಾ ಸೇರಿ ಕ್ಷೇತ್ರಕ್ಕೂ ನನಗೂ ಭಾವನಾತ್ಮಕ ಸಂಬಂಧ ಬೆಸೆದಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಯರನಳ್ಳಿ, ದಕ್ಷಿಣ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಪ್ರಮುಖರಾದ ಚಂದ್ರಯ್ಯ ಸ್ವಾಮಿ, ಸಂಜುಕುಮಾರ ಕೋಳಿ, ಬಾಬುರಾವ ಮಲ್ಕಾಪುರೆ, ಶಿವಕುಮಾರ ಸ್ವಾಮಿ, ಸುರೇಶ ಮಾಶೆಟ್ಟಿ, ಶಿವರಾಜ ಪಾಟೀಲ್ ಐಸಪುರ, ಘಾಳೆಪ್ಪ ಚಟ್ನಳ್ಳಿ, ಸಂತೋಷರಡ್ಡಿ ಆಣದೂರ, ಉದಯ ತೋರಣ, ಶಿವು ಸುಲ್ತಾನಪುರ, ಜೋಸೆಫ್ ಕೊಡ್ಡಿಕರ್, ರಾಮು ಅಮಲಾಪುರ, ಸೂರ್ಯಕಾಂತ, ರತಿಕಾಂತ, ಸುಧಾಕರ್, ಸಾಯಿನಾಥ, ಅಮಲಾಪುರ ಗ್ರಾಪಂ ಪಿಡಿಒ ದೇವಪ್ಪ, ಗುತ್ತಿಗೆದಾರರ ಅನೀಲ ರಾಠೋಡ್ ಇತರರಿದ್ದರು.