

ಬೀದರ್: ಬ್ರಾಹ್ಮಣರ ಕುರಿತು ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ನೀಡಿರುವ ಅಪಮಾನಕರ ಹೇಳಿಕೆಯನ್ನು ಜಿಲ್ಲಾ ಬ್ರಾಹ್ಮಣ ಮಹಾ ಸಂಘದ ಅಧ್ಯಕ್ಷ ರಮೇಶ್ ಕುಲಕರ್ಣಿ ಖಂಡಿಸಿದ್ದಾರೆ. ಬ್ರಾಹ್ಮಣರ ಬಾಯಿಗೆ ಶೌಚ ಮಾಡುವೆ ಎಂದಿರುವುದು ಅತ್ಯಂತ ಕೀಳು, ಅನಾಗರಿಕ ಹಾಗೂ ಅಸಭ್ಯ ಹೇಳಿಕೆ. ಇದು ಒಂದು ಸಮುದಾಯವನ್ನು ನಿಂದಿಸಿದ ಹೇಳಿಕೆಯಷ್ಟೇ ಅಲ್ಲ, ಭಾರತೀಯ ಸಂಸ್ಕೃತಿ, ಪರಂಪರೆ, ಸಹಿಷ್ಣುತೆ ಹಾಗೂ ಸೌಹಾರ್ದದ ವಿರುದ್ಧದ ಹೇಳಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಕಶ್ಯಪ್ ನೀಡಿರುವ ಹೇಳಿಕೆ ಸಮಾಜದಲ್ಲಿ ದ್ವೇಷದ ವಿಷ ಹರಡುವಂಥದ್ದು. ಬ್ರಾಹ್ಮಣ ಸಮುದಾಯದ ಅವಹೇಳನ ಮಾಡಿದ ಕಾರಣಕ್ಕೆ ಸರ್ಕಾರ ಅನುರಾಗ್ ಕಶ್ಯಪ್ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಅವರ ಚಲನಚಿತ್ರಗಳನ್ನು ಬಹಿಷ್ಕರಿಸಬೇಕು. ಕೂಡಲೇ ಕ್ಷಮೆಯಾಚಿಸಬೇಕು ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.