

ಬೀದರ್: ಬೆಂಗಳೂರಿನಲ್ಲಿ ಅಪರಿಚಿತ ದುಷ್ಕರ್ಮಿಗಳು ಭಾರತೀಯ ವಕೀಲರ ಪರಿಷತ್ ಸಹ ಅಧ್ಯಕ್ಷ ಸದಾಶಿವ ರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ವಕೀಲರು ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ನ್ಯಾಯಾಲಯದಲ್ಲಿ ಸೇರಿದ ವಕೀಲರು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದರು. ಬಳಿಕ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣಪ್ಪ(ಪುಟ್ಟು) ಪಾಟೀಲ ಅವರ ಮುಂದಾಳತ್ವದಲ್ಲಿ ಕೈಗೆ ಕೆಂಪು ಪಟ್ಟಿ ಧರಿಸಿ ನ್ಯಾಯಾಲಯದಿಂದ ಶಿವಾಜಿ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಲ್ಲಿ ಮಾನವ ಸರಪಳಿ ರಚಿಸಿ ಕೆಲ ಕಾಲ ರಸ್ತೆ ತಡೆ ಮಾಡಿದರು. ಅನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರಿಗೆ ಸಲ್ಲಿಸಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷರೂ ಆದ ಹಿರಿಯ ವಕೀಲ ಸದಾಶಿವ ರೆಡ್ಡಿ ಅವರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಪೈಪ್‍ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿದರು.
ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಘಟನೆಯ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಎಸ್. ಬಿರಾದಾರ, ಉಪಾಧ್ಯಕ್ಷ ಗುಂಡುರೆಡ್ಡಿ ಗುಡಾಡಿ, ಜಂಟಿ ಕಾರ್ಯದರ್ಶಿ ಶಿಲ್ಪಾ ಪಾಟೀಲ, ಖಜಾಂಚಿ ಪ್ಯಾರುಸಾಬ್ ಎಂ. ಶೇಕ್, ಹಿರಿಯ ವಕೀಲರಾದ ಬಾಬುರಾವ್ ಹೊನ್ನಾ, ಬಿ. ಕೃಷ್ಣಪ್ಪ, ನಾರಾಯಣ ಗಣೇಶ್, ರತ್ನಾ ಅಗ್ರೆ ಮತ್ತಿತರರು ಪಾಲ್ಗೊಂಡಿದ್ದರು.