

ಬೀದರ್: ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ತೀವ್ರವಾಗಿ ಖಂಡಿಸಿದೆ.
ಶಿವಮೊಗ್ಗದ ಆದಿಚುಂಬನಗಿರಿ ಕಾಲೇಜಿನಲ್ಲಿ ವಿದ್ಯಾರ್ಥಿಯ ಜನಿವಾರ ತೆಗೆಸಲಾಗಿದ್ದರೆ, ಬೀದರ್‍ನ ಸಾಯಿ ಸ್ಫೂರ್ತಿ ಕಾಲೇಜಿನಲ್ಲಿ ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿ ಪರೀಕ್ಷೆಯಿಂದ ವಂಚಿತನಾಗಿದ್ದಾನೆ ಎಂದು ಸಂಘದ ಅಧ್ಯಕ್ಷ ಸಂತೋಷಕುಮಾರ ಜೋಳದಾಪಕೆ ತಿಳಿಸಿದ್ದಾರೆ.
ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಇಲ್ಲಿ ಹಲವಾರು ಜಾತಿ, ಧರ್ಮಗಳ ಜನರಿದ್ದಾರೆ. ತಮ್ಮ ತಮ್ಮ ಧಾರ್ಮಿಕ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ. ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಯಲು ಸೂಚಿಸಿರುವುದು ಆಘಾತಕಾರಿ ಎಂದು ಹೇಳಿದ್ದಾರೆ.
ಜನಿವಾರ, ಶಿವದಾರ, ರುದ್ರಾಕ್ಷಿ ಸೇರಿದಂತೆ ಧಾರ್ಮಿಕ ಚಿನ್ಹೆಗಳನ್ನು ತೆಗೆಯಬೇಕೆಂಬ ನಿಯಮ ಎಲ್ಲೂ ಇಲ್ಲ. ಪರೀಕ್ಷಾ ಕೇಂದ್ರದವರು ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವುದು ಹಾಗೂ ಅವರ ಭವಿಷ್ಯದೊಂದಿಗೆ ಚೆಲ್ಲಾಟವಾಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಲೋಪ ಎಸಗಿದವರ ವಿರುದ್ಧ ಕ್ರಮ ಜರುಗಿಸಬೇಕು. ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.