ಖುರೇಶಿ ಸಮುದಾಯದ ಸಮಸ್ಯೆ ಬಗೆಹರಿಸಲು ಒತ್ತಾಯ

Photo
Published on

ಬೀದರ್: ಖುರೇಶಿ ಸಮುದಾಯದ ವಿವಿಧ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಕರ್ನಾಟಕ ಖುರೇಶ್ ಕಾನ್ಫರೆನ್ಸ್ ರಾಜ್ಯ ಅಧ್ಯಕ್ಷ ಅಬ್ದುಲ್ ನಬಿ ಖುರೇಶಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದ್ದಾರೆ. ಖುರೇಶಿ ಸಮುದಾಯ ರಾಜ್ಯದಲ್ಲಿ ೧೬ ಲಕ್ಷ ಜನಸಂಖ್ಯೆ ಹೊಂದಿದ್ದು, ಪ್ರಾಣಿ ವ್ಯಾಪಾರ ಹಾಗೂ ಮಾಂಸ ವ್ಯಾಪಾರದ ಮೂಲಕ ಜೀವನ ನಿರ್ವಹಣೆ ಮಾಡುತ್ತಿದೆ. ಹಿಂದಿನ ಸರ್ಕಾರ ಕಸಾಯಿಖಾನೆಗಳನ್ನು ಮುಚ್ಚಿರುವುದರಿಂದ ಹಾಗೂ ಹೊಸ ಕಾನೂನು ಜಾರಿಗೊಳಿಸಿದ್ದರಿಂದ ವ್ಯವಹಾರ ಸಂಪೂರ್ಣ ನಿಂತು ಹೋಗುವ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಚ್ಚಲಾದ ಕಸಾಯಿಖಾನೆಗಳನ್ನು ಆಧುನಿಕರಿಸಿ, ಪುನರಾಂಭಿಸಬೇಕು. ರಾಜ್ಯ ಮಾಂಸ ಮಂಡಳಿ ರಚಿಸಿ, ಏಕಗವಾಕ್ಷಿ ವ್ಯವಸ್ಥೆ ಜಾರಿಗೆ ತರಬೇಕು. ಕರ್ನಾಟಕ ಗೋಮಾಂಸ ನಿಷೇಧ ಕಾನೂನು ೨೦೨೧ ಅನ್ನು ಹಿಂಪಡೆದು, ೧೯೬೪ ರ ಹಳೆ ಕಾನೂನು ಮರು ಜಾರಿಗೊಳಿಬೇಕು. ಗೋಶಾಲೆ ಹಾಗೂ ಗೋ ರಕ್ಷಣೆಯ ಹೆಸರಲ್ಲಿ ದನದ ವ್ಯಾಪಾರಿಗಳ ವಾಹನಗಳನ್ನು ತಡೆದು, ಗುಂಪು ದರೋಡೆ ಮಾಡುವ ಸರ್ಕಾರೇತರ ಸಂಸ್ಥೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಖುರೇಶಿ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net