ಮೋವ್‍ನಲ್ಲಿ ಅಂಬೇಡ್ಕರ್ ಜಯಂತಿ ಆಯೋಜನೆ

Dr. B.R. Ambedkar Jayanti Wall Poster Release (1)
Published on

ಬೀದರ್: ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯು ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಸ್ಥಳ ಮಧ್ಯಪ್ರದೇಶದ ಮೋವ್‍ನಲ್ಲಿ ಏ. 14 ರಂದು ಆಯೋಜಿಸಿರುವ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಭಿತ್ತಿಪತ್ರವನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನಗರದ ಅಕ್ಕ ಮಹಾದೇವಿ ಕಾಲೇಜಿನಲ್ಲಿ ಗುರುವಾರ ಬಿಡುಗಡೆ ಮಾಡಿದರು.

ಸಮಿತಿ ಪ್ರತಿ ವರ್ಷ ಒಂದೊಂದು ಸ್ಥಳದಲ್ಲಿ ಡಾ. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಏರ್ಪಡಿಸುತ್ತ ಬಂದಿದೆ. ಈಗಾಗಲೇ ನವದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಚಂಡಿಗಢ್ ಮತ್ತಿತರ ಕಡೆ ಜಯಂತಿ ಆಚರಿಸಲಾಗಿದೆ. ಈ ಬಾರಿ ಅವರ ಜನ್ಮಸ್ಥಳದಲ್ಲೇ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದರು.

ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಮೋವ್‍ನ ಅಂಬೇಡ್ಕರ್ ನಗರದಲ್ಲಿ ಅದ್ಧೂರಿ ಹಾಗೂ ಅರ್ಥಪೂರ್ಣ ಜಯಂತಿ ಆಚರಣೆಗೆ ಈಗಾಗಲೇ ಭರದ ಸಿದ್ಧತೆಗಳು ನಡೆದಿವೆ ಎಂದು ಹೇಳಿದರು.

ಜಯಂತಿ ಅಂಗವಾಗಿ ಸಮಿತಿಯ ಕಾರ್ಯಕರ್ತರು ಹವಾ ಮಲ್ಲಿನಾಥ ಮಹಾರಾಜರ ಮುಂದಾಳತ್ವದಲ್ಲಿ ಏಪ್ರಿಲ್ 11 ರಂದು ಬೆಳಿಗ್ಗೆ 11ಕ್ಕೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಲಾಡಚಿಂಚೋಳಿ ಬಳಿಯ ಭಾರತ ಮಾತಾ ಮಂದಿರದಿಂದ ನೂರಾರು ವಾಹನಗಳಲ್ಲಿ ಮೋವ್‍ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕರ್ತರು ಸೋಲಾಪುರ, ಬಿಗವಾನ್, ದೌಂಡ್, ಸಂಭಾಜಿನಗರ, ಧುಳೆ ಮಾರ್ಗವಾಗಿ ಏಪ್ರಿಲ್ 14 ರಂದು ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಮೋವ್‍ಗೆ ತಲುಪಲಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿಗಳು ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ನಡೆಯಲಿದೆ. ದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಹಿಸಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ಸಂಗಮೇಶ ಚಂದಾಪುರೆ, ನಂದೇಶ್ ಪಾಟೀಲ, ಬಲವೀರ್ ಪಾಟೀಲ, ಮಾಣಿಕ, ಸತೀಶ್, ಈಶ್ವರ, ಶಿವಕುಮಾರ, ಪ್ರಶಾಂತ, ರಾಹುಲ್, ಸಚಿನ್, ಆನಂದ ರಾಂಪುರೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net