

ಬೀದರ್: ರೋಟರಿ ಕ್ಲಬ್ ಬೀದರ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಬಸವ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಶಿಬಿರದಲ್ಲಿ ಒಟ್ಟು 425 ಜನರ ನೇತ್ರ, ದಂತ, ಎಲುಬು, ನರ, ಗಂಟಲು, ಕಿವಿ, ಮೂಗು, ಹೃದಯ ಮತ್ತಿತರ ರೋಗಗಳ ತಪಾಸಣೆ ಮಾಡಲಾಯಿತು.
ಇಸಿಜಿ, ಟೂಡಿ, ಮಧುಮೇಹ, ರಕ್ತದೊತ್ತಡ, ರಕ್ತ ಪರೀಕ್ಷೆ ಉಚಿತವಾಗಿ ನಡೆಸಲಾಯಿತು. ತಪಾಸಣೆಗೆ ಒಳಗಾದವರಿಗೆ ಔಷಧ ವಿತರಿಸಲಾಯಿತು.
ನೇತ್ರ ಸಮಸ್ಯೆ ಹೊಂದಿರುವ ಐದು ಮಂದಿಗೆ ನೇತ್ರ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಲಾಯಿತು.
ಡಾ. ರಾಜಶೇಖರ ಸೇಡಂಕರ್, ಡಾ. ವಿ.ವಿ. ನಾಗರಾಜ, ಡಾ. ಸಿದ್ಧಲಿಂಗೇಶ್ವರ ಎ. ಮಠಪತಿ, ಡಾ. ನಿತಿನ್ ಗುದಗೆ, ಡಾ. ಶಿವಕುಮಾರ ಪಾಟೀಲ, ಡಾ. ಪ್ರಶಾಂತ ಪಾಟೀಲ, ಡಾ. ಸುಪ್ರಿಯಾ ಕೋಡಗೆ ಪಾಟೀಲ, ಡಾ. ಪರಮೇಶ್ವರ ಬಿರಾದಾರ, ಡಾ. ವಿನಾಯಕ ಜ್ಯಾಂತೆ, ಡಾ. ಬಸವಪ್ರಸಾದ್ ಪಾಟೀಲ, ಎಸ್.ಬಿ. ಪಾಟೀಲ ದಂತ ಆಸ್ಪತ್ರೆ ಹಾಗೂ ಮೇಗೂರ್ ಐ ಕೇರ್ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸಿದರು.
ಗ್ರಾಮೀಣ ಭಾಗದ ಜನರಿಗೆ ಅನುಕೂಲ ಮಾಡಿಕೊಡಲು ಉಚಿತ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಪಾಟೀಲ ತಿಳಿಸಿದರು.
ರೋಟರಿ ಕ್ಲಬ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜನ ಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಶಿಬಿರಗಳ ಮೂಲಕ ಗ್ರಾಮೀಣ ಭಾಗದ ಜನರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಎಂದು ಗುದಗೆ ಆಸ್ಪತ್ರೆಯ ಡಾ. ನಿತಿನ್ ಗುದಗೆ ಹೇಳಿದರು.
ಶಾಲೆಯ ಅಧ್ಯಕ್ಷರೂ ಆದ ಬೀದರ್ ಎಪಿಎಂಸಿ ಮಾಜಿ ಅಧ್ಯಕ್ಷ ಅನಿಲಕುಮಾರ ಪನ್ನಾಳೆ ಶಿಬಿರವನ್ನು ಉದ್ಘಾಟಿಸಿದರು.
ಪಿಎಸ್‍ಐ ನಂದಿನಿ, ಯಶೋಸಾಯಿ ಆಸ್ಪತ್ರೆಯ ಡಾ. ಸಿದ್ಧಲಿಂಗೇಶ್ವರ ಮಠಪತಿ, ಕ್ಲಬ್ ಮಾಜಿ ಅಧ್ಯಕ್ಷ ಹಾವಶೆಟ್ಟಿ ಪಾಟೀಲ, ರವಿ ಮೂಲಗೆ ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ಕೃಪಾಸಿಂಧು ಪಾಟೀಲ ಸ್ವಾಗತಿಸಿದರು. ಕ್ಲಬ್ ಕೋಶಾಧ್ಯಕ್ಷ ಅನಿಲ್ ಮಸೂದಿ ವಂದಿಸಿದರು.