ಸ್ವಸಹಾಯ ಸಂಘಗಳು ಆರ್ಥಿಕ ಸಬಲವಾಗಲಿ

tarabeti
Published on

ಹುಮನಾಬಾದ್: ಸರ್ಕಾರದಿಂದ ಸಿಗುವಂಥ ಸೌಲಭ್ಯ ಪಡೆದು ಸ್ವಸಹಾಯ ಸಂಘಗಳ ಸದಸ್ಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷರಾದ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಅಭಿಷೇಕ್ ಆರ್.ಪಾಟೀಲ್ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಸಹಯೋಗದಡಿ ಪಟ್ಟಣದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಡಿ ಬರುವ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗಾಗಿ ಆಯೋಜಿಸಿದ್ದ ವಿಶೇಷ ತರಬೇತಿಗೆ ಚಾಲನೆ ನೀಡಿದ ಅವರು, ಆರ್ಥಿಕವಾಗಿ ಹಿಂದುಳಿದ ಜನರ ಅಭಿವೃದ್ಧಿಗೆ ಸಹಕಾರ ಕ್ಷೇತ್ರದವರು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟಿ ಮಾತನಾಡಿ, ಸಹಕಾರ ಪವಿತ್ರ ಕ್ಷೇತ್ರ. ಇಲ್ಲಿ ಯಾವುದೇ ರೀತಿ ತಾರತಮ್ಯವಿಲ್ಲದೆ ಎಲ್ಲರೂ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.

ಡಿಸಿಸಿ ಬ್ಯಾಂಕ್ ಶಾಖೆಯ ಎಸ್ಎಚ್ಜಿ ಸಂಯೋಜಕ ವೀರೇಶ್ ಆರ್. ಮಾತನಾಡಿ, ಸಹಕಾರ ಕ್ಷೇತ್ರದಿಂದ ಸ್ವಸಹಾಯ ಸಂಘಗಳಿಗೆ ಬಹಳಷ್ಟು ಅನುಕೂಲವಾಗಿದ್ದು, ಆರ್ಥಿಕವಾಗಿ ಮಹಿಳೆಯರು ಸಬಲರಾಗಿದ್ದಾರೆ. ಎಸ್ಎಚ್ಜಿ ಸದಸ್ಯರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಬ್ಯಾಂಕ್ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

ಒಕ್ಕೂಟದ ನಿರ್ದೇಶಕರಾದ ಗುರುನಾಥಪ್ಪ ಎಖೇಳ್ಳಿ, ಮಲ್ಲಿಕಾರ್ಜುನ ದುಬಲಗುಂಡಿ, ದಯಾನಂದ ಜಿ., ತಾಪಂ ಸಹಾಯಕ ನಿರ್ದೇಶಕ ಶಿವಲೀಲಾ ಆರ್., ಮೀನಾಕುಮಾರಿ ಬೋರಾಳಕರ್, ರಾಮರಾವ ಸೂರ್ಯವಂಶಿ, ರೇಣುಕಾ, ಸಾಯಿಬಣ್ಣ ಇತರರಿದ್ದರು. ಒಕ್ಕೂಟದ ಸಿಇಒ ಎಚ್.ಆರ್. ಮಲ್ಲಮ್ಮ ನಿರೂಪಣೆ ಮಾಡಿದರು. ಮಾರುತಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net