

ಬೀದರ್: ಎಲ್ಲರ ಅಂಬೇಡ್ಕರ್ ಸಂಘಂ ಶರಣಂ ಗಚ್ಛಾಮಿ ನಾಟಕ ಪ್ರದರ್ಶನ ಏ.4ರಂದು ಸಂಜೆ 5.30ಕ್ಕೆ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಂರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್ ಹೇಳಿದರು.
ಅಭ್ಯುದಯ ಆಟ್ಸ್೯ ಅಕಾಡೆಮಿ ಹೈದರಾಬಾದ್ ಸಹಯೋಗದಡಿ ನಡೆಯಲಿರುವ ನಾಟಕ ಪ್ರದರ್ಶನ 90 ನಿಮಿಷದ್ದಾಗಿದೆ. ಇದರಲ್ಲಿ ಬುದ್ಧ, ಬಸವ ಹಾಗೂ ಡಾ.ಅಂಬೇಡ್ಕರ್ ತತ್ವಗಳು ಪ್ರಚಲಿತವಾಗಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಮ್ ಖಾನ್, ಸಂಸದ ಸಾಗರ್ ಖಂಡ್ರೆ ಹಾಗೂ ಜಿಲ್ಲೆಯ ಜನಪ್ರತಿನಿಗಳು, ಗಣ್ಯರು ಪಾಲ್ಗೊಳ್ಳಲಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ ಸರ್ಕಾರ ತೆಲುಗಿನಲ್ಲಿ ಈ ನಾಟಕ ಪ್ರದರ್ಶನ ಮಾಡುತ್ತಿದ್ದು, ಅದನ್ನು ಕನ್ನಡದಲ್ಲಿ ಅನುವಾದಿಸಲಾಗಿದೆ. ಡಾ.ಬಿ.ಆರ್. ಅಂಬೇಡ್ಕರ್ ಯಾವುದೇ ಜಾತಿಗೆ ಸೀಮಿತವಲ್ಲದ ಮಹಾನುಭಾವರು. ಎಲ್ಲರಿಗೂ ಬೇಕಾದ ನೇತಾರ. ಹೀಗಾಗಿ ಜಿಲ್ಲೆಯ ಎಲ್ಲ ಚಿಂತಕರು, ಸಾಹಿತಿಗಳು, ವಿದ್ವಾಂಸರು, ಶಿಕ್ಷಣ ಪ್ರೇಮಿಗಳು, ಸಂಘಟನೆಗಳ ಪ್ರಮುಖರು ನಾಟಕ ವೀಕ್ಷಿಸಬೇಕು ಎಂದು ಮನವಿ ಮಾಡಿದರು.
ಹುಮನಾಬಾದ್ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಮಾತನಾಡಿ, ವಿಕಾಸಸೌಧ ಮುಂಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಹಾಗೂ ಬಾಬಾ ಸಾಹೇಬರ ಸ್ಫೂರ್ತಿ ಸೌಧ, ವಸ್ತು ಸಂಗ್ರಹಾಲಯ ನಿರ್ಮಿಸಲು ಮುಖ್ಯಮಂತ್ರಿ ನಿರ್ಧರಿಸಿ 87 ಕೋಟಿ ಅನುದಾನ ಒದಗಿಸಿದ್ದು ಖುಷಿ ತಂದಿದೆ ಎಂದು ತಿಳಿಸಿದರು.
ಮುಖಂಡ ಬಾಬುರಾವ ಪಾಸ್ವಾನ್ ಮಾತನಾಡಿದರು. ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಪ್ರದೀಪ್ ನಾಟೇಕರ್, ಸಂದೀಪ್ ಕಾಂಟೆ, ರಮೇಶ ಮಂದಕನಳ್ಳಿ ಇತರರಿದ್ದರು.