ಸಾಂಸ್ಕೃತಿಕ ನಾಯಕರ ಐಕ್ಯ ಕ್ಷೇತ್ರಕ್ಕೆ ಸೌಕರ್ಯ ಕಲ್ಪಿಸಿ

Dr Ashokkumar Nagure 1
Published on

ಬೀದರ್: ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ಇರುವ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಐಕ್ಯ ಕ್ಷೇತ್ರಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಬೀದರ್‍ನ ಬಸವೇಶ್ವರ ವೆಲ್‍ಫೇರ್ ಅಸೋಸಿಯೇಷನ್ ಅಧ್ಯಕ್ಷ ಡಾ. ಅಶೋಕಕುಮಾರ ನಾಗೂರೆ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಮುಖ್ಯಮಂತ್ರಿ ಹಾಗೂ ರಾಜ್ಯದ ಎಲ್ಲ ಸಚಿವರಿಗೆ ಬರೆದ ಮನವಿ ಪತ್ರವನ್ನು ಗುರುವಾರ ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ.

ಬೇರೆ ರಾಜ್ಯಗಳಲ್ಲಿ ಸಾಂಸ್ಕೃತಿಕ ನಾಯಕರ ಸ್ಮಾರಕಗಳು ಮಾದರಿಯಾಗಿವೆ. ಬಸವಣ್ಣನವರ ಕ್ಷೇತ್ರ ಮಾತ್ರ ಅವ್ಯವಸ್ಥೆಯ ಗೂಡಾಗಿದೆ ಎಂದು ದೂರಿದ್ದಾರೆ.

ದೇಶ, ವಿದೇಶದಿಂದ ನಿತ್ಯ ಸಾವಿರಾರು ಜನ ಭೇಟಿ ನೀಡುವ ಕ್ಷೇತ್ರದಲ್ಲಿ ಸರಿಯಾದ ವಸತಿ ಗೃಹ, ಸ್ನಾನ ಗೃಹ, ಬಟ್ಟೆ ಬದಲಾಯಿಸುವ ಕೋಣೆ, ಡಸ್ಟ್ ಬೀನ್, ಗೈಡ್‍ಗಳು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ

ನದಿಯ ಮೆಟ್ಟಿಲುಗಳು ಹಾಸುಗಟ್ಟಿ ಭಕ್ತರು ಕಾಲು ಜಾರಿ ಬೀಳುತ್ತಿದ್ದಾರೆ. ಐಕ್ಯ ಮಂಟಪ ಜಾಳು ಹಿಡಿದಿದೆ. ಕ್ಷೇತ್ರದ ಪರಿಸರ ಮಾಲಿನ್ಯದಿಂದ ಕೂಡಿದೆ. ದರ್ಶನಕ್ಕೂ ಶುಲ್ಕ ವಿಧಿಸಲಾಗಿದೆ. ಎಲ್ಲೆಡೆ ಬಸವಣ್ಣನವರ ಭಾವಚಿತ್ರ ಅಳವಡಿಸಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಬಸವಣ್ಣನವರ ಕಾರ್ಯಗಳ ಬಗ್ಗೆ ತಮ್ಮ ಅನೇಕ ಭಾಷಣಗಳಲ್ಲಿ ಪ್ರಸ್ತಾಪಿಸಿದ್ದಾರೆ. ವಿಶ್ವವೇ ಬಸವಣ್ಣನವರ ತತ್ವಗಳನ್ನು ಅಪ್ಪಿಕೊಳ್ಳುತ್ತಿದೆ. ಆದರೆ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಅವರ ಐಕ್ಯ ಕ್ಷೇತ್ರ ಮಾದರಿಯಾಗಿ ರೂಪುಗೊಳ್ಳಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ಐಕ್ಯ ಕ್ಷೇತ್ರದ ಅಭಿವೃದ್ಧಿಗೆ ಕಾಳಜಿ ತೋರಬೇಕು. ಅಂತರರಾಷ್ಟ್ರೀಯ ಪ್ರವಾಸಿ ತಾಣವಾಗಿ ರೂಪಿಸಬೇಕು. ಅಗತ್ಯ ಮೂಲ ಸೌಕರ್ಯ ಒದಗಿಸಬೇಕು. ಕ್ಷೇತ್ರದ ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net