

ಬೀದರ್: ಇಲ್ಲಿಯ ಪ್ರಧಾನ ಅಂಚೆ ಕಚೇರಿಯ ಸಿಬ್ಬಂದಿ ರಕ್ತದ ತುರ್ತು ಅವಶ್ಯಕತೆ ಇರುವವರಿಗೆ ನೆರವಾಗಲು ರಕ್ತದಾನ ಸಪ್ತಾಹ ಹಮ್ಮಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.
ಸಪ್ತಾಹದ ಮೊದಲ ದಿನವಾದ ಸೋಮವಾರ ನಾಲ್ವರು ಸಿಬ್ಬಂದಿ ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.
ಜಿಲ್ಲಾ ರಕ್ತನಿಧಿ ಕೇಂದ್ರದಲ್ಲಿ ರಕ್ತದ ಕೊರತೆ ಇರುವ ಮಾಹಿತಿ ಹಿನ್ನೆಲೆಯಲ್ಲಿ ಇಲಾಖೆ ಸಿಬ್ಬಂದಿಯಿಂದ ರಕ್ತದಾನ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ಸಪ್ತಾಹದ ಆಯೋಜಕರೂ ಆದ ಪ್ರಧಾನ ಅಂಚೆ ಕಚೇರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಗಲಾ ಭಾಗವತ್ ತಿಳಿಸಿದರು.
ಸಪ್ತಾಹದಲ್ಲಿ ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆಯಾಗದಂತೆ ನಿತ್ಯ ಕೆಲ ಸಿಬ್ಬಂದಿ ರಕ್ತದಾನ ಮಾಡಲಿದ್ದಾರೆ. ಮೊದಲ ದಿನ ಕೃಷ್ಣ, ಸುನೀಲ್, ದತ್ತಪ್ಪ ಸುರನರ ಹಾಗೂ ದತ್ತು ‘ಬಿ ಪಾಸಿಟಿವ್’ ರಕ್ತ ದಾನ ಮಾಡಿದ್ದಾರೆ ಎಂದು ತಿಳಿಸಿದರು.
ಅಂಚೆ ಇಲಾಖೆಯ ಸಿಬ್ಬಂದಿ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ ಎಂದು ಅಂಚೆ ಅಧೀಕ್ಷಕ ವಿ.ಎಲ್. ಚಿತಕೋಟೆ ಹೇಳಿದರು.
ರಕ್ತನಿಧಿ ಕೇಂದ್ರದ ಮನವಿಗೆ ಸ್ಪಂದಿಸಿ ಅಂಚೆ ಇಲಾಖೆ ಸಿಬ್ಬಂದಿ ರಕ್ತದಾನ ಮಾಡಿರುವುದು ಸಂತಸ ಉಂಟು ಮಾಡಿದೆ ಎಂದು ಜಿಲ್ಲಾ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ವೀರೇಂದ್ರ ಪಾಟೀಲ ತಿಳಿಸಿದರು.