23ಕ್ಕೆ ರಾಮೇಶ್ವರದಲ್ಲಿ ಅಮರ ಬಲಿದಾನ ದಿನಾಚರಣೆ

Amar Balidan Din Poster Release
Published on

ಬೀದರ್: ಜೈ ಭಾರತ ಮಾತಾ ಸೇವಾ ಸಮಿತಿಯು ಮಾ. 23 ರಂದು ತಮಿಳುನಾಡಿನ ರಾಮೇಶ್ವರದಲ್ಲಿ ಅಮರ ಬಲಿದಾನ ದಿನ ಆಚರಿಸಲು ನಿರ್ಧರಿಸಿದೆ.

ಸಮಿತಿಯಿಂದ ಈಗಾಗಲೇ ಬೆಂಗಳೂರು, ಮುಂಬೈ, ನವದೆಹಲಿ, ಪಂಜಾಬ್‍ನಲ್ಲಿ ಅಮರ ಬಲಿದಾನ ದಿನ ಆಚರಿಸಲಾಗಿದೆ. ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರ ನೇತೃತ್ವದಲ್ಲಿ ಈ ಬಾರಿ ರಾಮೇಶ್ವರದ ತುಳಸಿ ಬಾಬಾ ಮಾದಮ ರಸ್ತೆಯಲ್ಲಿರುವ ಗೋಸ್ವಾಮಿ ಮಾದಮ ಸತ್ಸಂಗ ಹಾಲ್‍ನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ತಿಳಿಸಿದ್ದಾರೆ.

ಬಲಿದಾನ ದಿನದ ಅಂಗವಾಗಿ ತಿರಂಗಾ ಯಾತ್ರೆ ನಡೆಯಲಿದೆ. ಯಾತ್ರೆ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಭಾರತ ಮಾತಾ ಮಂದಿರದಿಂದ ಮಾ. 20 ರಂದು ಆರಂಭಗೊಳ್ಳಲಿದೆ ಎಂದು ಹೇಳಿದ್ದಾರೆ.

ಯಾತ್ರೆಯು ಕಲಬುರಗಿ, ಜೇವರ್ಗಿ, ಶಹಾಪುರ, ಸುರಪುರ, ಲಿಂಗಸೂರ, ಮಸ್ಕಿ, ಸಿಂಧನೂರು, ಶಿರಗುಪ್ಪ ಮಾರ್ಗವಾಗಿ ಸಾಗಿ ಬಳ್ಳಾರಿಯ ಬೈರಾಪುರದ ಮಲ್ಲಿನಾಥ ಆಶ್ರಮ ತಲುಪಲಿದೆ. ಮಾ. 21 ರಂದು ಅಲ್ಲಿಂದ ಚಲಿಕೇರಾ, ಹಿರೂರು, ಶಿರಾ, ತುಮಕೂರ, ನೆಲಮಂಗಲ, ನೈಸ್ ರಸ್ತೆ, ಹೊಸೂರು ರಸ್ತೆ, ಚಂದಾಪುರ ಮೂಲಕ ಅತ್ತಿಬೆಲೆಯ ಎಸ್.ಬಿ. ಕಲ್ಯಾಣ ಮಂಟಪಕ್ಕೆ ತಲುಪಲಿದೆ. ಅಲ್ಲಿಂದ ಹೊರಟು ಮಾ. 23ಕ್ಕೆ ರಾಮೇಶ್ವರ ತಲುಪಲಿದೆ ಎಂದು ಹೇಳಿದ್ದಾರೆ.

ಭಗತ್‍ಸಿಂಗ್, ಸುಖದೇವ್, ರಾಜಗುರು, ಸುಭಾಷ್‍ಚಂದ್ರ ಬೋಸ್, ಚಂದ್ರಶೇಖರ ಆಜಾದ್, ಅಶ್ಫಾಕ್‍ಉಲ್ಲಾ ಖಾನ್, ರಾಮಪ್ರಸಾದ್ ಬಿಸಮಿಲ್, ವೀರ ಸಾವರಕರ್, ಉದಮಸಿಂಗ್, ಝಾನ್ಸಿರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ವಾಸುದೇವ ಬಲವಂತರಾವ್ ಸೇರಿದಂತೆ ಸಾವಿರಾರು ಜನ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ನೀಡಿದ್ದಾರೆ. ಅವರನ್ನು ಸ್ಮರಿಸುವುದು ಹಾಗೂ ಗೌರವಿಸುವುದು ದೇಶದ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಅಮರ ಬಲಿದಾನ ದಿನಾಚರಣೆ ಕಾರ್ಯಕ್ರಮ ಹಾಗೂ ತಿರಂಗಾ ಯಾತ್ರೆಯಲ್ಲಿ ದೇಶ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಭಿತ್ತಿಪತ್ರ ಬಿಡುಗಡೆ: ಜೈ ಭಾರತ ಮಾತಾ ಸೇವಾ ಸಮಿತಿ ರಾಮೇಶ್ವರದಲ್ಲಿ ಹಮ್ಮಿಕೊಂಡಿರುವ ಅಮರ ಬಲಿದಾನ ದಿನಾಚರಣೆಯ ಭಿತ್ತಿಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಬೀದರ್‍ನಲ್ಲಿ ಶನಿವಾರ ಬಿಡುಗಡೆ ಮಾಡಿದರು. ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಹಾಗೂ ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net