

ಬೀದರ್: ಕರ್ನಾಟಕ ರಾಜ್ಯ ವಕೀಲರ ಪರಿಷತ್ ನೂತನ ಅಧ್ಯಕ್ಷರಾಗಿ ಉತ್ತರ ಕರ್ನಾಟಕ ಭಾಗದ ಎಸ್.ಎಸ್. ಮಿತ್ತಲಕೋಡ್ ನೇಮಕಗೊಂಡ ಪ್ರಯುಕ್ತ ವಕೀಲರು ನಗರದಲ್ಲಿ ಶುಕ್ರವಾರ ಸಂಭ್ರಮ ಆಚರಿಸಿದರು.
ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಪರಸ್ಪರ ಸಿಹಿ ತಿನ್ನಿಸಿ, ಸಂತಸ ಹಂಚಿಕೊಂಡರು.
ಭಾರತೀಯ ವಕೀಲರ ಪರಿಷತ್, ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಹಿರಿಯ ವಕೀಲ ಎಸ್.ಎಸ್. ಮಿತ್ತಲಕೋಡ್ ಅವರನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಜಿಲ್ಲೆಯ ವಕೀಲರಿಗೆ ಸಂತಸ ಉಂಟು ಮಾಡಿದೆ. ಉತ್ತರ ಕರ್ನಾಟಕ ಭಾಗದ ವಕೀಲರಿಗೆ ಇನ್ನಷ್ಟು ಬಲ ತಂದುಕೊಟ್ಟಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪ (ಪುಟ್ಟು) ಪಾಟೀಲ ಹೇಳಿದರು.
ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ, ಜಂಟಿ ಕಾರ್ಯದರ್ಶಿ ಶಿಲ್ಪಾ ಪಾಟೀಲ, ಹಿರಿಯ ವಕೀಲರಾದ ಗುರುನಾಥ ಜ್ಯಾಂತಿಕರ್, ಜಯಕುಮಾರ ಕಾಂಗೆ, ಕೀರ್ತಿರಾಜ ಪೋಸ್ತೆ, ಸಂಗಮೇಶ, ವೀರಣ್ಣ ಶಿರಶೆಟ್ಟಿ, ಮಂಗಲಾ ಜಾಡಿಗೆ, ಜಯಶ್ರೀ ಪಾಟೀಲ, ಪದ್ಮ ಮಹಾರಾಜ ಮತ್ತಿತರರು ಇದ್ದರು.