

ಬೀದರ್: ಬೀದರ್ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದಜೆಗೇರಲಿರುವುದರಿಂದ ನಗರದ ಅಭಿವೃದ್ಧಿಗೆ ಸರ್ಕಾರದಿಂದ ಹೆಚ್ಚು ಅನುದಾನ ಲಭಿಸಲಿದೆ ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಹೇಳಿದರು.
ನಗರದ ಬಿಲಾಲ್ ಕಾಲೊನಿಯ ಜಾಸ್ಮಿನ್ ಎಜುಕೇಷನ್ ಟ್ರಸ್ಟ್ ಸಂಚಾಲಿತ ಜಾಸ್ಮಿನ್ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಈಚೆಗೆ ನಡೆದ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸದ್ಯ ಬೀದರ್ ನಗರಸಭೆಗೆ ರೂ. 10 ಕೋಟಿ ಅನುದಾನ ದೊರೆಯುತ್ತಿದ್ದು, ಮಹಾನಗರ ಪಾಲಿಕೆಯಾದ ನಂತರ ರೂ. 100 ಕೋಟಿ ಸಿಗಲಿದೆ. ಇದರಿಂದ ನಗರದಲ್ಲಿ ರಸ್ತೆ, ಚರಂಡಿ, ದಾರಿದೀಪ ಸೇರಿದಂತೆ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಲಿವೆ ಎಂದು ತಿಳಿಸಿದರು.
ಪ್ರೀತಿ, ವಿಶ್ವಾಸ, ಸೌಹಾರ್ದದ ವಾತಾವರಣದಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂಬುದು ನನ್ನ ಅಭಿಪ್ರಾಯ. ನನ್ನ ಅಧಿಕಾರ ಅವಧಿಯಲ್ಲಿ ಈ ದಿಸೆಯಲ್ಲೇ ಕಾರ್ಯ ನಿರ್ವಹಿಸಿದ್ದೇನೆ. ಬೀದರ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದು ಹೇಳಿದರು.
ಪಾಲಕರು ಮಕ್ಕಳ ಬಗ್ಗೆ ಸಾಕಷ್ಟು ಕನಸು ಕಂಡಿರುತ್ತಾರೆ. ಅವರಿಗಾಗಿ ಪರಿಶ್ರಮ ಪಡುತ್ತಾರೆ. ಮಕ್ಕಳು ಪಾಲಕರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು ಎಂದು ತಿಳಿಸಿದರು.
ಆಧುನಿಕ ಕಲಿಕಾ ಸೌಕರ್ಯಗಳನ್ನು ಹೊಂದಿರುವ ಜಾಸ್ಮಿನ್ ಶಾಲೆ ಕಡಿಮೆ ಶುಲ್ಕದಲ್ಲಿ ಮಕ್ಕಳಿಗೆ ಗುಣಮಟ್ಟದ ಹಾಗೂ ಸ್ಪರ್ಧಾತ್ಮಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.
ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್‍ನ ಜಿಲ್ಲಾ ಮೇಲ್ವಿಚಾರಕ ನೆಲ್ಸನ್ ಸುಮಿತ್ರಾ, ಬೀದರ್ ವಿಶ್ವವಿದ್ಯಾಲಯದ ಕುಲಸಚಿವ ಪರಮೇಶ್ವರ್ ನಾಯ್ಕ್, ಸುವರ್ಣ ಕನ್‍ಸ್ಟ್ರಕ್ಷನ್ಸ್ ಮುಖ್ಯಸ್ಥ ವೀರಶೆಟ್ಟಿ ಮಣಗೆ ಮಾತನಾಡಿದರು.
ವಿದ್ಯಾರ್ಥಿಗಳಿಂದ ನಡೆದ ನೃತ್ಯ, ಗಾಯನ, ರೂಪಕ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.
ಜಾಸ್ಮಿನ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಅಜಿಜ್ ಖಾನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಸೈಮನ್ ಜೋಶ್ವಾ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಮಹಮ್ಮದ್ ಯುಸೂಫ್ ಮತ್ತಿತರರು ಇದ್ದರು.