ಮ್ಯಾನ್ ಪವರ್ ಏಜೆನ್ಸಿ ವಿರುದ್ಧ ಕರವೇ ಧರಣಿ

Karave Dharni -1
Published on

ಬೀದರ್: ಕಾರ್ಮಿಕರ ಹಿತ ರಕ್ಷಿಸದ ಮ್ಯಾನ್ ಪವರ್ ಏಜೆನ್ಸಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಹಾಗೂ ವಜಾಗೊಳಿಸಲಾದ ಕಾರ್ಮಿಕನನ್ನು ಸೇವೆಗೆ ಮರು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.

ತಿರುಮಲ ಎಲೆಕ್ಟ್ರಿಕಲ್ ಮ್ಯಾನ್ ಪವರ್ ಏಜೆನ್ಸಿಯವರು ಕಾರ್ಮಿಕರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಕಾರಣವಿಲ್ಲದೆ ಕೆಲಸದಿಂದ ತೆಗೆದು ಹಾಕುತ್ತಿದ್ದಾರೆ ಎಂದು ಧರಣಿಯ ನೇತೃತ್ವ ವಹಿಸಿದ್ದ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಆರೋಪಿಸಿದರು.

ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮದ 33 ಕೆ.ವಿ. ವಿದ್ಯುತ್ ಉಪ ಕೇಂದ್ರದಲ್ಲಿ ತಿರುಮಲ ಎಲೆಕ್ಟ್ರಿಕಲ್ ಮ್ಯಾನ್ ಪವರ್ ಏಜೆನ್ಸಿ ಮೂಲಕ ದಿನಗೂಲಿ ಆಧಾರದಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಾದೇವ ವೀರಶೆಟ್ಟಿ ಅವರನ್ನು ಯಾವುದೇ ನೋಟಿಸ್ ನೀಡದೆ, ಏಕಾ ಏಕಿ ಕೆಲಸದಿಂದ ವಜಾಗೊಳಿಸಲಾಗಿದೆ. ಕಾರಣ, ಕಾರ್ಮಿಕನ ಕುಟುಂಬದ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.

ಕಾರ್ಮಿಕನ ಮರು ನೇಮಕಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಸುಳ್ಳು ಭರವಸೆ ಕೊಡಲಾಗಿದೆ ಎಂದು ಆರೋಪಿಸಿದರು.

ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಮೇಶ ಪಾಟೀಲ ಅವರು ದೂರವಾಣಿ ಮೂಲಕ ಮಾರ್ಚ್ 5 ರ ಒಳಗೆ ಕಾರ್ಮಿಕನನ್ನು ಮರು ನೇಮಕ ಮಾಡಿಕೊಳ್ಳುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು.

ಮಂಗಳವಾರದೊಳಗೆ ಕಾರ್ಮಿಕನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳದಿದ್ದರೆ ಗ್ರಾಮಸ್ಥರೊಂದಿಗೆ ಮುಧೋಳ (ಬಿ) ಗ್ರಾಮದ 33 ಕೆ.ವಿ. ವಿದ್ಯುತ್ ಉಪ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಎಂದು ಸೋಮನಾಥ ಮುಧೋಳ ಹೇಳಿದ್ದಾರೆ.

ವೇದಿಕೆಯ ಜಿಲ್ಲಾ ಘಟಕದ ಉಪಾಧ್ಯಕ್ಷ ಸೋಮಶೇಖರ ಸಜ್ಜನ್, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಗೌಡ, ಬೀದರ್ ತಾಲ್ಲೂಕು ಅಧ್ಯಕ್ಷ ವೀರಶೆಟ್ಟಿ ಗೌಸಪುರ, ಔರಾದ್ ತಾಲ್ಲೂಕು ಅಧ್ಯಕ್ಷ ಅನಿಲ್ ಹೇಡೆ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಬಂಡೆಪ್ಪ ಕರಬಸಣ್ಣ, ಕಮಲನಗರ ತಾಲ್ಲೂಕು ಅಧ್ಯಕ್ಷ  ಸುಭಾಷ್ ಗಾಯಕವಾಡ್, ಹುಮನಾಬಾದ್ ತಾಲ್ಲೂಕು ಅಧ್ಯಕ್ಷ ವೀರೇಶ್ ರೆಡ್ಡಿ, ಉದಯಕುಮಾರ ಅಷ್ಟೂರೆ, ಮಲ್ಲಿಕಾರ್ಜುನ ಸಿಕೇನಪುರ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net