ಕ್ರೈಸ್ತ ಮಿಷನರಿಗಳ ಕೊಡುಗೆ ಶ್ಲಾಘನೀಯ

Seminar -1
Published on

ಬೀದರ್: ಕನ್ನಡ ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಕ್ರೈಸ್ತ ಮಿಷನರಿಗಳು ನೀಡಿದ ಕೊಡುಗೆ ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಭಿಪ್ರಾಯ ಪಟ್ಟರು.

ಅವರು ರೆವರೆಂಡ್ ಡಾ. ಜೆ.ಟಿ. ಸಿಮಂಡ್ಸ್ ಕನ್ನಡ ಸಾಹಿತ್ಯ ಸಂಘವು ಇಲ್ಲಿಯ ಮಂಗಲಪೇಟ್‍ನ ಚರ್ಚ್‍ನಲ್ಲಿ ಆಯೋಜಿಸಿದ್ದ ಜೆ. ಎಫ್. ಫ್ಲಿಟ್ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಕ್ರೈಸ್ತ ಮಿಷನರಿಯವರು ಸಾಮಾಜಿಕ, ಧಾರ್ಮಿಕ ಸೇವೆಯ ಜೊತೆಗೆ ಕನ್ನಡ ಶಬ್ದಕೋಶ ರಚನೆ, ವ್ಯಾಕರಣ,

ಹಸ್ತಪ್ರತಿ ಸಂಗ್ರಹಿಸುವ, ಅವುಗಳನ್ನು ಶಾಸ್ತ್ರಿಯವಾಗಿ ಸಂಪಾದಿಸುವ ಮಹತ್ವದ ಕಾರ್ಯ ಮಾಡಿದ್ದಾರೆ. ಅಲ್ಲದೆ ಸಾಹಿತ್ಯ - ಸಂಸ್ಕøತಿಗೂ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಸೇಂಟ್ ಪೌಲ್ ಮೆಥೋಡಿಸ್ಟ್  ಸೆಂಟ್ರಲ್ ಚರ್ಚಿನ (ಉತ್ತರ) ಸಭಾಪಾಲಕ ರೆವರೆಂಡ್ ಎಸ್. ಎಲ್. ತುಕಾರಾಮ ಮಾತನಾಡಿ, ಕ್ರೈಸ್ತ ಮಿಷನರಿಗಳು ಮತ್ತು ಅಧಿಕಾರಿಗಳು ಸತಿ ಸಹಗಮನ ಪದ್ಧತಿ, ಜಾತೀಯತೆಯನ್ನು ಹೋಗಲಾಡಿಸಲು ಶ್ರಮಿಸಿದ್ದರು. ಜನರಲ್ಲಿ ಭಾತೃತ್ವ ಭಾವನೆ ಬೆಳೆಸಿದರು ಎಂದು ತಿಳಿಸಿದರು.

ಜೆ. ಎಫ್. ಫ್ಲಿಟ್ ಅವರನ್ನು ಕುರಿತು ವಿಶೇಷ ಉಪನ್ಯಾಸ ನೀಡಿದ ಬೀದರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಾಜಕುಮಾರ ಅಲ್ಲೂರೆ ಮಾತನಾಡಿ, ಬಿ. ಎಲ್. ರೈಸ್ ಮತ್ತು ಜೆ. ಎಫ್. ಫ್ಲಿಟ್ ಕನ್ನಡ ಶಾಸನ ಕ್ಷೇತ್ರದ ಇಬ್ಬರು ಅಶ್ವಿನಿ ದೇವತೆಗಳು ಎಂದರು.

ಬಹುಮುಖ ಪ್ರತಿಭೆಯ ಫ್ಲಿಟ್ ಅವರಿಗೆ ಅನೇಕ ಭಾಷೆಗಳ ಅರಿವಿತ್ತು. ಜೊತೆಗೆ ಹಲವು ಜ್ಞಾನ ಶಿಸ್ತುಗಳ ಬಗ್ಗೆ ಅಪಾರ ಪಾಂಡಿತ್ಯ ಇತ್ತು. ಇತಿಹಾಸ, ಶಾಸನ, ನಾಣ್ಯಶಾಸ್ತ್ರ, ತರ್ಕಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಸಾಕಷ್ಟು ತಿಳುವಳಿಕೆ ಇತ್ತು. ಹೀಗಾಗಿ ಅವರಿಗೆ ಶಾಸನಗಳ ಸಂಗ್ರಹ-ಸಂಪಾದನೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮೌಲ್ಯಾಧಾರಿತ ಕೊಡುಗೆ ನೀಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು.

ರೆವರೆಂಡ್ ಡಾ. ಜೆ.ಟಿ. ಸೀಮಂಡ್ಸ್ ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಿ.ಕೆ. ಸುಂದರರಾಜ್ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಸಹ-ಪ್ರಾಧ್ಯಾಪಕ ಹುದ್ದೆಗೆ ಪದೊನ್ನತ್ತಿ ಹೊಂದಿದ ಡಾ. ಮನೋಹರ ಮೇತ್ರೆ, ಡಾ. ಜೈಭಾರತ ಮಂಗೇಶ್ಕರ್, ಡಾ. ಸಂಜೀವಕುಮಾರ ಕೋಹಿನೂರ ಹಾಗೂ ಕರ್ನಾಟಕ ರಾಜ್ಯ ರೇಡಿಯೋಲಾಜಿಸ್ಟ್ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಟಿ. ಎಂ. ಮಚ್ಚೆ ಅವರನ್ನು ಸನ್ಮಾನಿಸಲಾಯಿತು. ಸಂಘದ ಕಾರ್ಯದರ್ಶಿ ಡಾ. ಧನರಾಜ ತುಡಮೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ರೆವರೆಂಡ್ ಸಿಮೋನ್ ಮಾರ್ಕ್, ಶಂಭುಲಿಂಗ ವಾಲ್ದದೊಡ್ಡಿ, ಜೇಕಬ್, ಡಾ. ಬಸವರಾಜ ಬಲ್ಲೂರ, ಡಾ. ಈಶ್ವರಯ್ಯ ಕೊಡಂಬಲ್, ಡಾ. ಮೇರಿ, ಜಗನಾಥ ಕಮಲಪೂರೆ, ಯೇಶಪ್ಪ ತುಡಮೆ, ಭೀಮಣ್ಣ ಅಷ್ಟೂರ ಇದ್ದರು. ಶರಣಪ್ಪ ಸಿಂಗಾರೆ ಸ್ವಾಗತಿಸಿದರು. ಟಿ. ಜೆ. ಹಾದಿಮನಿ ನಿರೂಪಿಸಿದರು. ಟಿ. ಎಂ. ಮಚ್ಚೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net