ಬೀದರ್: ವಿಧಾನ ಪರಿಷತ್ ಮಾಜಿ ಸದಸ್ಯ ಕಾಜಿ ಅರಶದ್ ಅಲಿ ಅವರ ನಿಧನಕ್ಕೆ ಕಾಂಗ್ರೆಸ್ ಕಿಸಾನ್, ಖೇತ್ ಮಜ್ದೂರ್ ವಿಭಾಗದ ರಾಷ್ಟ್ರೀಯ ಸಂಯೋಜಕ ಪ್ರಕಾಶ್ ಘಾಳೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅರಶದ್ ಅಲಿ ಅವರು ಪತ್ರಕರ್ತ, ಸಮಾಜ ಪರ ಚಿಂತಕ, ರಾಜಕೀಯ ಮುಖಂಡ, ಬಿಡಿಎ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾಗಿ ಬೀದರ್ ಜಿಲ್ಲೆ ಹಾಗೂ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದ್ದಾರೆ.
ಅರಶದ್ ಅಲಿ ಅವರು ಸದಾ ಸಾಮಾಜಿಕ ನ್ಯಾಯದ ಪರವಾಗಿರುತ್ತಿದ್ದರು. ಅನ್ಯಾಯದ ವಿರುದ್ಧ ಹೋರಾಟ ನಡೆಸುವವರನ್ನು ಬೆಂಬಲಿಸುತ್ತಿದ್ದರು. ಜಾತಿ, ಧರ್ಮ, ಹಿರಿಯರು, ಕಿರಿಯರು ಎನ್ನುವ ಭೇದ ಭಾವ ಅವರಲ್ಲಿ ಇರಲಿಲ್ಲ. ಅನೇಕರ ಸಾಮಾಜಿಕ ಹಾಗೂ ರಾಜಕೀಯ ಬೆಳವಣಿಗೆಗೆ ಕಾರಣರಾಗಿದ್ದರು ಎಂದು ಹೇಳಿದ್ದಾರೆ.
ದೇವರು ಅವರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬ ವರ್ಗಕ್ಕೆ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.