ಪೊಲೀಸ್ ಗೌರವದೊಂದಿಗೆ ಅರಶದ್ ಅಲಿ ಅಂತ್ಯಕ್ರಿಯೆ

bhalki 1
Published on

ಬೀದರ್: ಹೃದಯಾಘಾತದಿಂದ ನಿಧನರಾದ ವಿಧಾನ ಪರಿಷತ್ ಮಾಜಿ ಮಾಜಿ ಸದಸ್ಯ ಕಾಜಿ ಅರಶದ್ ಅಲಿ ಅವರ ಅಂತ್ಯಕ್ರಿಯೆ ಸಕಲ ಪೊಲೀಸ್ ಗೌರವಗಳೊಂದಿಗೆ ಭಾಲ್ಕಿಯಲ್ಲಿ ಮಂಗಳವಾರ ನಡೆಯಿತು.

ಭಾಲ್ಕಿಯ ಅವರ ಜಮೀನಿನಲ್ಲಿ ಇರುವ ಸ್ಮಶಾನದಲ್ಲಿ ಪ್ರಾರ್ಥನೆ ಬಳಿಕ ಧಾರ್ಮಿಕ ವಿಧಿ, ವಿಧಾನಗಳ ಪ್ರಕಾರ ಅಂತ್ಯಕ್ರಿಯ ನೆರವೇರಿಸಲಾಯಿತು.

ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಗಲಿದ ಸ್ನೇಹ ಜೀವಿಗೆ ಗೌರವ ಸಮರ್ಪಿಸಿದರು.

ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ರಾಜಕೀಯ ಗಣ್ಯರು, ಸ್ನೇಹಿತರು, ಸಂಬಂಧಿಕರು, ಕುಟುಂಬದ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರು ಮೃತರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ಕುಟುಂಬದ ಸದಸ್ಯರಲ್ಲಿ ದುಃಖ ಮಡುಗಟ್ಟಿತ್ತು.

ಸಂಸದ ಸಾಗರ್ ಖಂಡ್ರೆ ಹಾಗೂ ಗಣ್ಯರು ಅಂತಿಮ ದರ್ಶನ ಪಡೆದರು. ಕಂದಾಯ ಇಲಾಖೆ, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಇದಕ್ಕೂ ಮುನ್ನ ಬೀದರ್‍ನ ನೂರ್‍ಖಾನ್ ತಾಲೀಂನಲ್ಲಿರುವ ಅರಶದ್ ಅಲಿ ಅವರ ನಿವಾಸದಿಂದ ಜಾಮಾ ಮಸೀದಿ ವರೆಗೆ ಪಾರ್ಥಿವ ಶರೀರದ ಮೆರವಣಿಗೆ ನಡೆಯಿತು. ಜಾಮಾ ಮಸೀದಿಯಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆ ಸಲ್ಲಿಸಲಾಯಿತು.

ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯರಾದ ವಿಜಯಸಿಂಗ್, ಅರವಿಂದಕುಮಾರ ಅರಳಿ, ಕೆ. ಪುಂಡಲೀಕರಾವ್, ಮುಖಂಡರಾದ ಬಿ.ಜಿ. ಶೆಟಕಾರ್, ರಮೇಶ ಗೋಯಲ್ ಸೇರಿದಂತೆ ನೂರಾರು ಜನ ಪಾರ್ಥಿವ ಶರೀರದ ಕೊನೆಯ ದರ್ಶನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net