ವಕೀಲರ ಸಂಘದ ಕಟ್ಟಡ: ಲಿಫ್ಟ್ ಕಾಮಗಾರಿಗೆ ಚಾಲನೆ

vakilar Sangh - Copy
Published on

ಬೀದರ್: ಇಲ್ಲಿಯ ಜಿಲ್ಲಾ ವಕೀಲರ ಸಂಘದ ಕಟ್ಟಡದಲ್ಲಿ ಲಿಫ್ಟ್ ಅಳವಡಿಕೆ ಕಾಮಗಾರಿಗೆ ಸಂಸದ ಸಾಗರ್ ಖಂಡ್ರೆ ಮಂಗಳವಾರ ಚಾಲನೆ ನೀಡಿದರು.

ನಾನೂ ವಕೀಲನಾಗಿದ್ದು, ವಕೀಲರ ಸಂಘದ ಸದಸ್ಯನಾಗಿದ್ದೇನೆ. ವಕೀಲರ ಸಮಸ್ಯೆಗಳ ಪರಿಹಾರ ಹಾಗೂ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಅವರು ಹೇಳಿದರು.

ಕಳೆದ ಲೋಕಸಭೆ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿ, ಗೆಲ್ಲಿಸಿದ ವಕೀಲರಿಗೆ ಕೃತಜ್ಞತೆ ಸಲ್ಲಿಸುವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಿವಶರಣಪ್ಪ (ಪಪ್ಪು) ಪಾಟೀಲ ಮಾತನಾಡಿ, ವಕೀಲರ ಸಂಘದ ಕಟ್ಟಡ 2018 ರಲ್ಲೇ ಪೂರ್ಣಗೊಂಡಿದೆ. ಆದರೆ, ಲಿಫ್ಟ್ ಅಳವಡಿಕೆ ಆಗಿರಲಿಲ್ಲ. ಇದೀಗ ಕಾಮಗಾರಿ ಆರಂಭವಾಗಿರುವುದು ಸಂತಸ ಉಂಟು ಮಾಡಿದೆ ಎಂದು ತಿಳಿಸಿದರು.

ಸರ್ಕಾರ ವಕೀಲರ ಗೃಹ ನಿರ್ಮಾಣ ಮಂಡಳಿ ಸ್ಥಾಪಿಸಬೇಕು. ವಕೀಲರ ಸಂಘದ ಕಟ್ಟಡಕ್ಕೆ ಸೋಲಾರ್ ಘಟಕ ಅಳವಡಿಸಲು ಅನುದಾನ ಒದಗಿಸಬೇಕು. ಯುವ ವಕೀಲರ ಪ್ರೋತ್ಸಾಹ ಧನ ಹೆಚ್ಚಿಸಬೇಕು ಎಂದು ಬೇಡಿಕೆ ಮಂಡಿಸಿದರು.

ಇದೇ ವೇಳೆ ಜಿಲ್ಲಾ ವಕೀಲರ ಸಂಘದಿಂದ ಸಾಗರ್ ಖಂಡ್ರೆ ಅವರನ್ನು ಅಭಿನಂದಿಸಲಾಯಿತು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ವಿ.ಎಂ. ಆನಂದಶೆಟ್ಟಿ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಗುಂಡರೆಡ್ಡಿ ಗುಡಾಡಿ, ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಬಿರಾದಾರ, ಜಂಟಿ ಕಾರ್ಯದರ್ಶಿ ಶಿಲ್ಪಾ ಪಾಟೀಲ, ಖಜಾಂಚಿ ಪ್ಯಾರುಸಾಬ್ ಎಂ. ಶೇಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net