

ಬೀದರ್: ಮಠ ಮಾನ್ಯಗಳಿಗೆ ಭಕ್ತರ ಉದ್ಧಾರ ಹಾಗೂ ಸಮಾಜದ ಹಿತವೇ ಮುಖ್ಯವಾಗಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ನುಡಿದರು.
ಲಿಂಗಾಯತ ಮಹಾಮಠದ ವತಿಯಿಂದ ನಗರದ ಬಸವಗಿರಿಯಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಮಠಗಳು ಯಾರದ್ದಾದರೂ ಅಧೀನದಲ್ಲಿರಬೇಕಾದರೆ ಅದು ಭಕ್ತರ ಅಧೀನದಲ್ಲಿರಬೇಕು. ಯಾವ ಕಾರಣಕ್ಕೂ ಯಾರ ಹಂಗಿಗೂ ಒಳಗಾಗಬಾರದು ಎಂದು ಹೇಳಿದರು.
ಅಕ್ಕ ಅನ್ನಪೂರ್ಣತಾಯಿ ಅವರು ಭಕ್ತರ ಬಾಳು ಬೆಳಗಿಸಲು ಅವಿರತ ಶ್ರಮಿಸಿದ್ದರು. ಅವರು ಹಾಕಿಕೊಟ್ಟ ಬಸವ ಮಾರ್ಗದಲ್ಲೇ ಮುನ್ನಡೆಯುತ್ತಿರುವೆ ಎಂದು ತಿಳಿಸಿದರು.
ಪ್ರಸ್ತುತ ಪ್ರತಿಯೊಬ್ಬರೂ ತಮ್ಮ ಬದುಕಿನ ರೀತಿ ಬಗ್ಗೆ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಹಾಗೆ ಮಾಡಿದ್ದಲ್ಲಿ ಮುಂದಿನ ಜೀವನ ಸುಖಮಯವಾಗುತ್ತದೆ ಎಂದು ಹೇಳಿದರು.
ಬಸವಣ್ಣನವರ ವಚನಗಳಲ್ಲಿ ಆತ್ಮವಿಮರ್ಶೆ ಕುರಿತು ಉಪನ್ಯಾಸ ನೀಡಿದ ಬಸವಕಲ್ಯಾಣದ ಬಸವ ತತ್ವ ಪ್ರಚಾರಕ ಬಸವದೇವರು, ಬೇರೆಯವರ ತಪ್ಪುಗಳನ್ನು ಹುಡುಕದೆ, ಮೊದಲು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಆತ್ಮಸಾಕ್ಷಿ ಒಪ್ಪುವಂತೆ ಬದುಕು ಸಾಗಿಸಬೇಕು ಎಂದು ತಿಳಿಸಿದರು.
ಯುರೋಪ ದೇಶದಲ್ಲಿ ಬಸವ ತತ್ವ ಪ್ರಚಾರ ಕೈಗೊಂಡ ಯೋಗ ಗುರು ಕವಿತಾ ಚಂದ್ರಶೇಖರ್ ಸನ್ಮಾನ ಸ್ವೀಕರಿಸಿ ಮಾತನಾಡಿ, ವೈಜ್ಞಾನಿಕವಾಗಿರುವ ಬಸವತತ್ವ ಇಂದು ಜಗತ್ತಿಗೆ ಅವಶ್ಯಕವಾಗಿದೆ. ವಿದೇಶಿಗರೂ ಬಸವ ತತ್ವವನ್ನು ಅಪ್ಪಿಕೊಳ್ಳುತ್ತಿದ್ದು, ಇದನ್ನು ವಿಶ್ವದಾದ್ಯಂತ ಪಸರಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಜರ್ಮನಿಯ ಶಹನಾಯ್ ಅವರು ಫೆ. 26 ರಂದು ಲಿಂಗಾಯತ ಮಹಾಮಠದಲ್ಲಿ ನಡೆಯಲಿರುವ ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಲಿಂಗಾಯತ ಧರ್ಮ ಸ್ವೀಕರಿಸಲಿದ್ದು, ಬಸವ ತತ್ವ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಒಲವಿಗೆ ಇದು ನಿದರ್ಶನವಾಗಿದೆ ಎಂದು ತಿಳಿಸಿದರು.
ಜರ್ಮನಿಯ ಶಹನಾಯ್ ಕಾರ್ಯಕ್ರಮ ಉದ್ಘಾಟಿಸಿದರು. ಖಾದಿ ಮತ್ತು ಕೈಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಲಿಂಗಾಯತ ಮಹಾಮಠದ ಕಾರ್ಯದರ್ಶಿ ಚನ್ನಬಸಪ್ಪ ಹಂಗರಗಿ, ಪ್ರಮುಖರಾದ ಅಶೋಕ ಎಲಿ, ಪ್ರಕಾಶ ಮಠಪತಿ, ಅಣವೀರ ಕೊಡಂಬಲ್, ಸಿ.ಎಸ್. ಗಣಾಚಾರಿ, ಆರ್.ಕೆ. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಚೆನ್ನಮ್ಮ ಮಹಾದೇವ ಪಾಟೀಲ ನವಲಸಪುರ ಬಸವ ಪೂಜೆ ನೆರವೇರಿಸಿದರು. ಶಾಮಲಾ ಎಲಿ ವಚನ ಪಠಣ ಮಾಡಿದರು.
ಪ್ರಿಯಾ ಬರಗಲೆ ಸ್ವಾಗತಿಸಿದರು. ಬಸವರಾಜಕುಮಾರ ಚಿಕ್ಕಲಿಂಗೆ ನಿರೂಪಿಸಿದರು. ರೇವಣಸಿದ್ದ ಗಣಾಚಾರಿ ವಂದಿಸಿದರು. ಮಹಾನಂದಾ ಮಾರುತಿ ಪಾಟೀಲ ಭಕ್ತಿ ದಾಸೋಹಗೈದರು.