ಗುರುಕುಲ ಮಾದರಿ ಶಿಕ್ಷಣ ಅವಶ್ಯಕ

Jiniyas public School-1
Published on

ಬೀದರ್: ಪ್ರಸ್ತುತ ಮಕ್ಕಳಿಗೆ ಸನಾತನ ಗುರುಕುಲ ಮಾದರಿಯ ಶಿಕ್ಷಣ ಅವಶ್ಯಕವಾಗಿದೆ ಎಂದು ಬೇಮಳಖೇಡ ಹಿರೇಮಠ ಸಂಸ್ಥಾನದ ಡಾ. ರಾಜಶೇಖರ ಶಿವಾಚಾರ್ಯ ನುಡಿದರು.

ನಗರದ ಚಿದ್ರಿ ರಸ್ತೆಯಲ್ಲಿನ ಜಿನಿಯಸ್ ಪಬ್ಲಿಕ್ ಶಾಲೆಯಲ್ಲಿ ಅಮೃತ ಉತ್ಸವ ಶೀರ್ಷಿಕೆಯಡಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಜಾಗತೀಕರಣದಿಂದಾಗಿ ಭಾರತೀಯ ಸಂಸ್ಕøತಿ, ಪರಂಪರೆಗೆ ಧಕ್ಕೆ ಉಂಟಾಗುತ್ತಿದೆ. ಮಕ್ಕಳನ್ನು ಆದರ್ಶ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ದೇಶದ ಪರಂಪರೆ ಹಾಗೂ ಸಂಸ್ಕøತಿಯನ್ನು ಉಳಿಸುವ ದಿಸೆಯಲ್ಲಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಶಾಲೆಯ ಕಾರ್ಯ ಪ್ರಶಂಸನೀಯ ಎಂದು ಹೇಳಿದರು.

ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮನ್ವಯ ಹಾಗೂ ಮೇಲುಸ್ತುವಾರಿ ಸಮಿತಿಯ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ದೇಶಕ್ಕೆ ಮೆಕಾಲೆ ಶಿಕ್ಷಣ ಬೇಕಿಲ್ಲ ಎಂದು ಹೇಳಿದರು.

ಸೊನ್ನೆಯನ್ನು ಕಂಡು ಹಿಡಿದ ಗಣಿತಜ್ಞ ಆರ್ಯಭಟ ಭಾರತೀಯದವರು. ಸದ್ಯ ವಿದೇಶಿಯರೂ ದೇಶದ ಪಾರಂಪರಿಕ ಶಿಕ್ಷಣ ಹಾಗೂ 108 ಕಲೆಗಳನ್ನು ಕಲಿಯುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿ ಮಠ ಪಾರಂಪರಿಕ ಶಿಕ್ಷಣ ನೀಡುತ್ತಿದೆ. ಭಾರತೀಯರು ಪಾರಂಪರಿಕ ಶಿಕ್ಷಣ ಹಾಗೂ ಕಲೆಗಳ ಮೊರೆ ಹೋಗಬೇಕಿದೆ ಎಂದು ತಿಳಿಸಿದರು.

ಮಕ್ಕಳಿಂದ ನಡೆದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಸಭಿಕರ ಗಮನ ಸೆಳೆದವು. ನಗರಸಭೆ ಮಾಜಿ ಅಧ್ಯಕ್ಷೆ ಫಾತಿಮಾ ಅನ್ವರ್ ಅಲಿ, ಅಶ್ವಿನಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಶಂಭುಲಿಂಗ ಕುದುರೆ ಮಾತನಾಡಿದರು. ಶಾಲೆಯ ಅಧ್ಯಕ್ಷ ಪ್ರವೀಣಕುಮಾರ ಸ್ವಾಮಿ, ನಿರ್ದೇಶಕ ಶಿವಲಿಂಗಯ್ಯ ಸ್ವಾಮಿ, ಪ್ರಾಚಾರ್ಯೆ ಮುಕ್ತಾಂಜಲಿ, ಪ್ರಸಾದ್ ಕುದರೆ, ಅಶ್ವಿನಿ ಕುದರೆ ಉಪಸ್ಥಿತರಿದ್ದರು.

ಅಪರ್ಣಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net