

ಬೀದರ್: ಸಂತರ ಸಹವಾಸ ಮತ್ತು ಸದ್ಗುರುವಿನ ಕೃಪೆಯ ಹೊರತು ಜೀವನ ಸಾರ್ಥಕ ಆಗದು. ಸದ್ಗುರು ಸಿಗುವುದೂ ದುರ್ಲಭ ಎಂದು ಪೂಜ್ಯ ಶ್ರೀಪತಾನಂದ ಮಹಾರಾಜರು ಹೇಳಿದರು.
ಬೀದರ್ ತಾಲ್ಲೂಕಿನ ಬಗದಲ್ ಗ್ರಾಮದ ಸದ್ಗುರು ಶ್ರೀಪತಾನಂದ ಆತ್ಮಾನಂದ ಮಹಾರಾಜ ಸಂಸ್ಥಾನದಲ್ಲಿ ನಡೆದ ಸಂತ ಶ್ರೇಷ್ಠ ಗೋವಿಂದಾನಂದ ಮಹಾರಾಜರ ರಥಯಾತ್ರಾ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಗುರುವಿನ ಸ್ಥಾನ ಎಲ್ಲಕ್ಕಿಂತ ದೊಡ್ಡದು. ಗುರು ಎಂದರೆ ಬೆಳಕು. ಶಿಷ್ಯರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವಾತ ಗುರು. ಭವದ ಬಂಧನದಿಂದ ಮುಕ್ತರಾಗಲು ಗುರುವಿನ ಕೃಪೆ ಬೇಕೇ ಬೇಕು ಎಂದು ಹೇಳಿದರು.
ಭಗವಂತನನ್ನು ಅರಿತುಕೊಳ್ಳಲು ಗುರು ಬೇಕು. ದೇವರ ಸ್ವರೂಪ ತಿಳಿಯಲೂ ಗುರುವಿನ ಮಾರ್ಗದರ್ಶನ ಬೇಕು. ಗುರುವಿನ ನೆರವಿಲ್ಲದೆ ಪರಮಾತ್ಮನನ್ನು ತಿಳಿಯುವುದು ಸಾಧ್ಯವಿಲ್ಲ. ಸೃಷ್ಟಿಯನ್ನು ನಿರ್ಮಿಸಿದಾತ ಭಗವಂತ. ನಮಗೆ ಜಗತ್ತು ಕಾಣುತ್ತದೆ. ಜಗತ್ತು ನಿರ್ಮಿಸಿದ ಪರಮಾತ್ಮ ಕಾಣಲಾರ. ಈ ಪರಮಾತ್ಮನನ್ನು ಕಾಣಲು ಗುರುವಿನ ಮಾರ್ಗದರ್ಶನ ಬೇಕು. ಪರಮಾತ್ಮ ನೇರವಾಗಿ ಕಾಣಲಾರ. ಗುರುವಿನ ರೂಪದಲ್ಲಿಯೇ ದರ್ಶನ ನೀಡುತ್ತಾನೆ ಎಂದು ಪ್ರತಿಪಾದಿಸಿದರು.
ಜೀವನದಲ್ಲಿ ಪರಮ ಸುಖಕ್ಕಾಗಿ ತ್ಯಾಗ ಮಾಡುವುದನ್ನು ಕಲಿತುಕೊಳ್ಳಬೇಕು. ಭೋಗ ದು:ಖಕ್ಕೆ ಮೂಲ. ಎಲ್ಲಿ ತ್ಯಾಗ ಇರುತ್ತದೆಯೋ ಅಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಸ್ವಾರ್ಥ ಭಾವ ಹೆಚ್ಚುತ್ತಿದೆ. ಸಮಾಜವನ್ನು ಕಾಡುತ್ತಿರುವ ಬಹುತೇಕ ಸಮಸ್ಯೆಗಳಿಗೆ ಅತಿಯಾದ ಸ್ವಾರ್ಥವೇ ಕಾರಣವಾಗಿದೆ. ಅತಿಯಾದ ಭೋಗವು ಶಾಂತಿ, ನೆಮ್ಮದಿ ಕಳೆಯುತ್ತಿದೆ. ನನ್ನದು ಎನ್ನುವುದನ್ನು ಬಿಡಬೇಕು ಎಂದು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳನ್ನು ಉದ್ದೇಶಿಸಿ ಸಲಹೆ ನೀಡಿದರು.
ಕ್ಷಣಿಕ ಸುಖ ನೀಡುವ ವಸ್ತುಗಳ ಆಕರ್ಷಣೆ ಹೆಚ್ಚಿದೆ. ಪರಮ ಸುಖ ನೀಡುವ ಭಕ್ತಿ, ಅಧ್ಯಾತ್ಮದ ಒಲವು ಕಮ್ಮಿಯಾಗುತ್ತಿದೆ. ಹಣ ಇದ್ದರೆ ಸಾಕು ಎಂಬ ಮನೋಭಾವದಿಂದ ಸ್ವಾರ್ಥ ಹೆಚ್ಚುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಣದಿಂದ ಶಾಂತಿ, ನೆಮ್ಮದಿ ಸಿಗಲಾರದು. ನಿಷ್ಕಾಮ ಕರ್ಮ, ಭಕ್ತಿ, ಅಧ್ಯಾತ್ಮ ಮಾರ್ಗದಲ್ಲಿಯೇ ಪರಮ ಸುಖ ಇದೆ. ಶಾಶ್ವತ ಶಾಂತಿಯೂ ಅಲ್ಲಿಯೇ ಇದೆ ಎಂದು ಹೇಳಿದರು.
ಹರಿನಾಮ ಅಖಂಡ ಸಪ್ತಾಹ
ಜಾತ್ರಾ ಮಹೋತ್ಸವ ನಿಮಿತ್ತ ಒಂದು ವಾರ ಗುರುಚರಿತ್ರ ಪಾರಾಯಣ, ಅಖಂಡ ಹರಿನಾಮ ಸಪ್ತಾಹ ಭಕ್ತಿ ಭಾವದಿಂದ ನಡೆಯಿತು. ಪೂಜ್ಯರಾದ ಮಾಳಸಾಕಾಂತ ಮಹಾರಾಜರು, ಶ್ರೀಕಾಂತ ಮಹಾರಾಜರ ಸಮ್ಮುಖದಲ್ಲಿ ಕಾಕಡ ಆರತಿ, ಭಜನೆ, ಹರಿಪಾಠ, ಗೀತಾ ಪಾರಾಯಣ ಮುಂತಾದ ಕಾರ್ಯಕ್ರಮಗಳು ನಡೆದವು.
ಫೆ. 4 ರಂದು ಸಮಾಧಿ ರುದ್ರಾಭಿಷೇಕ, 5 ರಂದು ಪಲ್ಲಕ್ಕಿ ಮೆರವಣಿಗೆ, ರಥೋತ್ಸವ ಮತ್ತಿತರ ಕಾರ್ಯಕ್ರಮಗಳು ವೈಭವಪೂರ್ಣವಾಗಿ ನಡೆದವು. ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಸರಳ ಜೀವನ, ಉನ್ನತ ವಿಚಾರ
ಭಗವದ್ಗೀತೆ ಕುರಿತು ಆಳ ಅಧ್ಯಯನ ಮಾಡಿರುವ ಶ್ರೀಪತಾನಂದ ಮಹಾರಾಜರದ್ದು ಸರಳ ಜೀವನ. ಸದಾ ಉನ್ನತ ವಿಚಾರ. ಭಕ್ತರ ಉದ್ಧಾರಕ್ಕಾಗಿ ಧ್ಯಾನ. ಸಾದಾ ಉಡುಪು. ಸಾದಾ ಜೀವನ. ಆಚಾರ ಸರಳ. ವಿಚಾರ ಶ್ರೇಷ್ಠ.
ಭವ್ಯ ಪರಂಪರೆಯುಳ್ಳ ಪೀಠಕ್ಕೆ ಅಧಿಪತಿಯಾಗಿದ್ದರೂ ಆಡಂಬರ ಇಲ್ಲ. ಅಧಿಕಾರಿ-ರಾಜಕಾರಣಿಗಳ ನಂಟಿನಿಂದ ಸದಾ ದೂರ. ಬಡವ- ಬಲ್ಲಿದ ಎಂಬ ಭೇದವಿಲ್ಲದೆ ಬಳಿ ಬಂದ ಎಲ್ಲರಿಗೂ ಸರಿ ದಾರಿ ತೋರುವ ನಿಷ್ಕಳಂಕ ಮನಸ್ಸು. ಭಗವದ್ಗೀತೆ, ಉಪನಿಷತ್ತು, ಬ್ರಹ್ಮಸೂತ್ರ, ರಾಮದಾಸರ ದಾಸ ಬೋಧ, ಭಾಗವತ ಮಹಾ ಪುರಾಣ, ಸಂತ ಏಕನಾಥರ ಭಾಗವತ, ಜ್ಞಾನೇಶ್ವರಿ, ಅಮೃತಾನುಭವ, ಪರಮಾಮೃತ, ಮುಕುಂದ ಮಹಾರಾಜರ ವಿವೇಕಸಿಂಧು, ಹಂಸರಾಜ ಸ್ವಾಮಿಗಳ ವೇದೇಶ್ವರಿ ಮುಂತಾದ ಶ್ರೇಷ್ಠ ಕೃತಿಗಳ ಅಧ್ಯಯನ ಮಾಡಿದವರು ಶ್ರೀಪತಾನಂದ ಮಹಾರಾಜರು.