ನೃತ್ಯದ ಸೊಬಗಿಗೆ ಮನ ಸೋತ ಪ್ರೇಕ್ಷಕರು

Natyashree-1
Published on

ಬೀದರ್: ನಾಟ್ಯಶ್ರೀ ನೃತ್ಯಾಲಯ ವತಿಯಿಂದ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆದ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವದಲ್ಲಿ ನೃತ್ಯದ ಸೊಬಗಿಗೆ ಪ್ರೇಕ್ಷಕರು ಮನ ಸೋತರು.

ಅಘೋರಿ ನೃತ್ಯ, ಭಾಂಗಡ ನೃತ್ಯ, ಗರ್ಬಾ ನೃತ್ಯ, ಭರತ ನಾಟ್ಯ, ಜಾನಪದ ನೃತ್ಯ, ವಚನ ನೃತ್ಯ, ಮರಾಠಿ ನೃತ್ಯ, ಪುಷ್ಪಾಂಜಲಿ, ದಶಾವತಾರ, ಕೃಷ್ಣನ ಲೀಲೆ, ನಟೇಶ ಕೌತ್ವಂ, ತಿಲ್ಲಾನ ಮೊದಲಾದ ನೃತ್ಯಗಳು ನೆರೆದವರನ್ನು ಪುಳಕಿತಗೊಳಿಸಿದವು.

ಮಂಗಳೂರಿನ ಚಲನಚಿತ್ರ ಬಾಲನಟ ಮಾಸ್ಟರ್ ಶೌರ್ಯರಾವ್ ಅವರು ಪ್ರದರ್ಶಿಸಿದ ಆಕರ್ಷಕ ನೃತ್ಯ, ವಿದುಷಿ ಸೌಂದರ್ಯ ಅವರ ಭರತನಾಟ್ಯ ಮಂತ್ರಮುಗ್ಧಗೊಳಿಸಿದವು. ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ನಿರ್ದೇಶನದಲ್ಲಿ ಕಲಾವಿದರು ಪ್ರದರ್ಶಿಸಿದ ಅಘೋರಿ ನೃತ್ಯವು ಮಹಾ ಕುಂಭ ಮೇಳದಲ್ಲೇ ಇರುವಂಥ ಅನುಭವ ಉಂಟು ಮಾಡಿತು. ಬಾಗಲಕೋಟೆಯ ನಟರಾಜ ಸಂಗೀತ ಮತ್ತು ನೃತ್ಯನಿಕೇತನ ಸಂಸ್ಥೆಯ ಕಲಾವಿದರು ಆಕರ್ಷಕ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿದರು.

‘ಮಹಾಶಕ್ತಿ ವೀರಭದ್ರ’ ರೂಪಕದಲ್ಲಿ ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ದಕ್ಷ ಯಜ್ಞ ಹಾಗೂ ವೀರಭದ್ರನ ಜನನದ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸಿದರು. ‘ಕನಕದಾಸರಿಗೆ ಶ್ರೀ ಕೃಷ್ಣ ದರ್ಶನ’ ರೂಪಕವು ಕನಕದಾಸರಿಗೆ ಶ್ರೀಕೃಷ್ಣನ ದರ್ಶನ ಹೇಗಾಯಿತು ಎನ್ನುವುದನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿತು. ಒನಕೆ ಓಬವ್ವ ರೂಪಕ ವೀರ ವನಿತೆ ಒನಕೆ ಓಬವ್ವರ ಶೌರ್ಯವನ್ನು ಅನಾವರಣಗೊಳಿಸಿತು.

ಕಲಬುರಗಿಯ ಪಂಡಿತ ಹನುಮಂತರಾವ್ ಮಳ್ಳಿ, ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಹಾಗೂ ಇತರರು ಸಂಗೀತ ಸುಧೆ ಹರಿಸಿದರು. ಭಾನುಪ್ರಿಯ ಅರಳಿ ಹಾಗೂ ತಂಡದವರು ಸುಗಮ ಸಂಗೀತ, ಮಹೇಶಕುಮಾರ ಕುಂಬಾರ ಜಾನಪದ ಗಾಯನ ನಡೆಸಿಕೊಟ್ಟರು. ಬೆಂಗಳೂರಿನ ನಾರಾಯಣ್ ಭಟ್ ಮಾಯಾ ಜಾದು ಪ್ರದರ್ಶನದ ಮೂಲಕ ಎಲ್ಲರನ್ನು ಮೂಕಸ್ಮಿತರಾಗಿಸಿದರು.

ಬಾಗಲಕೋಟೆಯ ಕಲಾವಿದೆ ವಿದುಷಿ ಶುಭದಾ ಗುರುರಾಜ ದೇಶಪಾಂಡೆ ಅವರಿಗೆ ರೂ. 15 ಸಾವಿರ ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡ ನಾಟ್ಯಶ್ರೀ ಪ್ರಶಸ್ತಿ 2025 ಪ್ರದಾನ ಮಾಡಲಾಯಿತು. 2023-24ನೇ ಸಾಲಿನ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ರಾಮಕೃಷ್ಣ ಸಾಳೆ, ರಾಜೇಂದ್ರಕುಮಾರ ಗಂದಗೆ, ಸಂಜೀವಕುಮಾರ ಅತಿವಾಳೆ ಹಾಗೂ ರೇಖಾ ಅಪ್ಪಾರಾವ್ ಸೌದಿ ಜಂಟಿಯಾಗಿ ನಟರಾಜನಿಗೆ ಪೂಜೆ ಸಲ್ಲಿಸುವ ಮೂಲಕ ಸಾಂಸ್ಕøತಿಕ ಕಲೆಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಪ್ರಶಸ್ತಿ ಪ್ರದಾನ ಹಾಗೂ ವೇದಿಕೆ ಕಾರ್ಯಕ್ರಮವನ್ನು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್ ಉದ್ಘಾಟಿಸಿದರು. ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ, ಸಾಹಿತಿ ಶಿವಕುಮಾರ ಕಟ್ಟೆ, ರಾಷ್ಟ್ರೀಯ ಬುಡಕಟ್ಟು ಕಲಾ ಪರಿಷತ್ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ, ಪ್ರಧಾನ ಅಂಚೆ ಪಾಲಕಿ ಮಂಗಲಾ ಭಾಗವತ್, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಡಿಟಿಒ ಸುಜಾತಾ ಪೂಜಾರಿ, ದೇವಿದಾಸ ಜೋಶಿ, ರಾಘವೇಂದ್ರ ಅಡಿಗ, ಬಸವರಾಜ ಮೂಲಗೆ ನಿರೂಪಿಸಿದರು. ಪ್ರೇಕ್ಷಕರಿಗೆ ಚಹಾ, ಶುದ್ಧ ಕುಡಿಯುವ ನೀರು, ರುಚಿಕಟ್ಟಾದ ಊಟದ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಜಿಲ್ಲೆಗಳ ಕಲಾ ತಂಡಗಳು ಪಾಲ್ಗೊಂಡಿದ್ದವು.

ನಾಟ್ಯ ಕಲೆ ಉಳಿಸಿ ಬೆಳೆಸಿ

ಬೀದರ್: ಭರತ ನಾಟ್ಯ ಶ್ರೀಮಂತ ಕಲೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಡಾ. ಡಿ.ವಿ. ಗುರುಪ್ರಸಾದ್ ಅಭಿಪ್ರಾಯಪಟ್ಟರು.

ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ನೃತ್ಯ, ಸಂಗೀತ ಸೇರಿದಂತೆ ಸೃಜನಶೀಲ ಕಲೆಗಳ ಆಸಕ್ತಿ ಬೆಳೆಸಬೇಕು ಎಂದು ತಿಳಿಸಿದರು.

ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಿದ್ದ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳನ್ನು ಶರಣ ನಾಡು ಬೀದರ್‍ನಲ್ಲಿ ಪಸರಿಸಿದ ಶ್ರೇಯ ನಾಟ್ಯಶ್ರೀ ನೃತ್ಯಾಲಯಕ್ಕೆ ಸಲ್ಲುತ್ತದೆ. ಭರತನಾಟ್ಯ ಕಲೆ ಬೆಳೆಸುತ್ತಿರುವ ರಾಣಿ ಸತ್ಯಮೂರ್ತಿ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಬೀದರ್ ಬಗ್ಗೆ ನನಗೆ ಬಹಳ ಪ್ರೀತಿ ಇದೆ. ಈ ಜಿಲ್ಲೆಯಲ್ಲಿ ಎಸ್.ಪಿ.ಯಾಗಿ ಕೆಲಸ ಮಾಡಿದ್ದೇನೆ. ಅನೇಕರೊಂದಿಗೆ ನನ್ನ ಬಾಂಧವ್ಯ ಇದೆ ಎಂದು ತಿಳಿಸಿದರು.

ಬೀದರ್ ವಿಶ್ವವಿದ್ಯಾಲಯದ ಕುಲಸಚಿವೆ ಸುರೇಖಾ ಮಾತನಾಡಿ, ಮಕ್ಕಳನ್ನು ಸಾಧ್ಯವಾದಷ್ಟು ಮೊಬೈಲ್‍ನಿಂದ ದೂರವಿರಿಸಬೇಕು. ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದರು.

ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ, ನಿರ್ದೇಶಕ ಕೆ. ಸತ್ಯಮೂರ್ತಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net