

ಚಿಟಗುಪ್ಪ: ಸಕಲ ಜೀವರಾಶಿಗಳಲ್ಲಿ ಮನುಷ್ಯ ಜನ್ಮ ಶ್ರೇಷ್ಠ. ಇಂಥ ಜನ್ಮ ಪಡೆದ ನಾವೆಲ್ಲರೂ ಬದುಕಿನ ಮೌಲ್ಯಗಳಿಗೆ ಅರ್ಥ ಬರುವಂತೆ ಜೀವನ ಸಾಗಿಸಬೇಕು ಎಂದು ಹಿರೇಮಠ ಸಂಸ್ಥಾನದ ಪೂಜ್ಯ ಡಾ.ರಾಜಶೇಖರ ಶಿವಾಚಾರ್ಯ ಹೇಳಿದರು.
ಬೇಮಳಖೇಡದ ಶಿವಯೋಗ ಮಹಾಸಂಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಬಸಂತ ಪಂಚಮಿ ನಿಮಿತ್ತ ಆಯೋಜಿಸಿದ್ದ ಮಾಸಿಕ ಶಿವದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 84 ಲಕ್ಷ ಜೀವ ರಾಶಿಗಳಿವೆ. ಅದರಲ್ಲಿ ಮನುಷ್ಯ ಹೊರತುಪಡಿಸಿದರೆ ಎಲ್ಲ ಜೀವರಾಶಿಗಳಿಗೆ ಮಾತು ಆಡಲು ಬರುವುದಿಲ್ಲ ಮತ್ತು ಅರಿವು ಇಲ್ಲ. ಕೇವಲ ಮನುಷ್ಯನಿಗೆ ಮಾತ್ರ ಮಾತು ಮತ್ತು ತಿಳಿವಳಿಕೆ ಇದ್ದು, ಇದು ದೇವರು ನೀಡಿದ ಶ್ರೇಷ್ಠ ವರದಾನವಾಗಿವೆ ಎಂದರು.
ಮನುಷ್ಯ ಬದುಕಿಗಾಗಿ ಅಶಾಶ್ವತವಾದ ವಸ್ತುಗಳನ್ನು ಸಂಗ್ರಹಿಸುವುದರಲ್ಲಿಯೇ ಆಯುಷ್ಯ ಮುಗಿಸುತ್ತಾನೆ. ಪರಮ ಸುಖ, ಶಾಂತಿ, ನೆಮ್ಮದಿ ನೀಡುವ ಸತ್ಯ, ಸುಜ್ಞಾನ ಧರ್ಮದ ಅರಿವು-ಆಚಾರಗಳನ್ನು ಸಂಗ್ರಹಿಸಬೇಕು. ಇದರಿಂದ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಶರಣಮ್ಮ ರೇವಪ್ಪ ಮುದ್ದಾ ಅಧ್ಯಕ್ಷತೆ ವಹಿಸಿದ್ದರು. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭು ಸಾವಳಗಿ, ಕಮಳಾಬಾಯಿ ಚಂದ್ರಶೆಟ್ಟಿ, ರಾಜಶೇಖರ ಕಾರಕನಳ್ಳಿ, ಮಂಜುಳಾ, ಬಸಮ್ಮ, ಗೌರಿ, ಬಸವರಾಜ ಸಿಂದೋಲ್, ಬಸಂತರಾಯ ಪಾಟೀಲ್, ಶಿವರುದ್ರಪ್ಪ ಮುದ್ದಾ, ಶಂಕ್ರಪ್ಪ ಬೊರಾಳ, ಶಾಮರಾವ ಮಾಸ್ತರ್, ಬಸವರಾಜ ಹಳದೊಡ್ಡಿ, ಪೂಜಾರಿ ಕಾರ್ತಿಕ ಸ್ವಾಮಿ, ಜ್ಯೋತಿ ಮೆಂಗಾ, ಸವಿತಾ ಕಾರಿ, ನಾಗಮ್ಮ ದಾನಾ, ಶಂಕ್ರೆಮ್ಮ ಸ್ವಾಮಿ, ವಿದ್ಯಾವತಿ ಗುಮ್ಮೆ, ಶೋಭಾ ಗಿರಿ ಇತರರಿದ್ದರು.