

ಔರಾದ್: ಇಂಗ್ಲಿಷ್ ಸರಿಯಾಗಿ ಅರ್ಥೈಸಿಕೊಂಡರೆ ಸುಲಭವಾದ ವಿಷಯ ಮತ್ತೊಂದಿಲ್ಲ ಎಂದು ನಾಗಮಾರಪಳ್ಳಿ ಸರ್ಕಾರಿ ಪ್ರೌಢ ಶಾಲೆ ಶಿಕ್ಷಕ ಜಗನ್ನಾಥ ದೇಶಮುಖ ಹೇಳಿದರು.
ತಾಲೂಕಿನ ಸಂತಪುರ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶೇಷ ಶೈಕ್ಷಣಿಕ ಕಾರ್ಯಾಗಾರ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಗ್ಲಿಷ್ ಕಬ್ಬಿಣದ ಕಡಲೆಯಲ್ಲ. ಇದೊಂದು ಅತ್ಯಂತ ಸರಳ ಭಾಷೆ. ಎಲ್ಲ ವಿಷಯಗಳಂತೆ ಇದನ್ನು ಸಮರ್ಥವಾಗಿ ಓದಬಲ್ಲೆ ಎಂಬ ಆತ್ಮ ವಿಶ್ವಾಸ ವಿದ್ಯಾರ್ಥಿಗಳಲ್ಲಿ ಮೂಡಬೇಕು ಎಂದರು.
ಪ್ರಾಚಾರ್ಯ ನವೀಲಕುಮಾರ ಉತ್ಕಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಕಲಿಕೆಯಲ್ಲಿ ಹೊಸ ವಿಧಾನ ಅಳವಡಿಕೆ ಹಾಗೂ ಪರೀಕ್ಷಾ ಭಯವನ್ನು ಕಡಿಮೆ ಮಾಡಲು ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ವ್ಯಾಕರಣ ಸಹಿತವಾಗಿ ಭಾಷೆಯ ಮೇಲಿನ ಹಿಡಿತ ಇದ್ದರೆ ಅಂಕಗಳಿಸುವುದು ಅತ್ಯಂತ ಸುಲಭ. ಕಷ್ಟ ಎನ್ನುವ ಪದವನ್ನು ಮನಸ್ಸಿನಿಂದ ಹೊರದೂಡಬೇಕು. ಭಾಷೆಯಲ್ಲಿ ಒಲವು, ಏಕಾಗ್ರತೆ, ಛಲ, ಶ್ರದ್ಧೆಯ ಜತೆಗೆ ಎಲ್ಲವನ್ನು ಕಲಿತು ಬರೆದು, ಮನನ ಮಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಎಕಲಾರ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಜ್ಞಾನದೇವ ಪಾಂಚಾಳ, ಸುಭಾಷಚಂದ್ರ ಬೋಸ್ ಪ್ರೌಢ ಶಾಲೆ ಮುಖ್ಯಗುರು ಮನೋಹರ ಬಿರಾದರ್ ಮಾತನಾಡಿದರು. ವಿವಿಧ ಪ್ರೌಢಶಾಲೆಯ ಎಚ್ಎಂ, ಶಿಕ್ಷಕರಾದ ಅನೀಲಕುಮಾರ, ಜಗನ್ನಾಥ ಕಟ್ಟೆ, ರೂಪಾ ಮೇತ್ರೆ, ಬಸವರಾಜ ಮಾಳಗೆ, ಮಲ್ಲಿಕಾರ್ಜುನ, ಸಾಯಿನಾಥ, ವಿಜಯಕುಮಾರ ಜೋಜನೆ, ಶಿವಕುಮಾರ ಹಿರೇಮಠ, ಗುರುಪ್ರೀತ್ ಕೌರ್, ಉಪನ್ಯಾಸಕರಾದ ಶಿವಪುತ್ರ ಧರಣಿ, ರಾಜಕುಮಾರ ಹಳ್ಳಿಕರ್, ವನದೇವಿ ಎಕ್ಕಳೆ, ಅಶ್ವಿನಿ ಹಿಂದೊಡ್ಡಿ, ಸುಧಾ ಕೌಟಿಗೆ, ಪ್ರಿಯಾಂಕಾ ಗುನ್ನಳ್ಳಿಕರ್, ನಿರ್ಮಲಾ ಜಮಾದಾರ, ಸುರ್ ಆಲೂರೆ, ಜೀತೇಂದ್ರ ಡಿಗ್ಗಿ, ಸಂತೋಷ ಧೂಳಗಂಡೆ ಇದ್ದರು.