

ಬೀದರ್: ಕೇಂದ್ರದ ಬಿಜೆಪಿ ಸರ್ಕಾರವು 2025-26ನೇ ಸಾಲಿನ ಬಜೆಟ್‍ನಲ್ಲಿ ಕೆಲ ರಿಯಾಯಿತಿಗಳನ್ನು ಪ್ರಕಟಿಸಿ ಜನರ ಮೂಗಿಗೆ ತುಪ್ಪ ಸವರುವ ಯತ್ನ ಮಾಡಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಟೀಕಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‍ನಲ್ಲಿ ಜನಸಾಮಾನ್ಯರ ಬದುಕು ಬದಲಾಯಿಸುವಂಥ ಯಾವುದೇ ಯೋಜನೆ ಇಲ್ಲ ಎಂದು ಹೇಳಿದ್ದಾರೆ.
ನಿರುದ್ಯೋಗ ಸಮಸ್ಯೆ ಯುವ ಜನರನ್ನು ಬಹುವಾಗಿ ಕಾಡುತ್ತಿದೆ. ಆದರೆ, ಆ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪ ಮಾಡಿಲ್ಲ. ತೆರಿಗೆ ಕಡಿತ ಮಾಡಿದ್ದಕ್ಕೆ ಬಿಜೆಪಿಯವರು ಚಪ್ಪಾಳೆ ತಟ್ಟಿದ್ದಾರೆ. ಆದರೆ, ಸಂಬಳ ಇದ್ದವರಿಗಷ್ಟೇ ಅದರ ಲಾಭ ಸಿಗಲಿದೆ. ಉದ್ಯೋಗವೇ ಇಲ್ಲದವರಿಗೆ ಸಂಬಳ ಎಲ್ಲಿಂದ ಬರುತ್ತದೆ. ತೆರಿಗೆ ವಿನಾಯಿತಿ ಹೇಗೆ ಸಿಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಬಜೆಟ್‍ನಲ್ಲಿ ಯುವಕರು, ಮಹಿಳೆಯರು, ಬಡವರು, ರೈತರ ಬಾಳು ಹಸನಾಗಿಸುವ ಮಹತ್ವದ ಯೋಜನೆಗಳಿಲ್ಲ. ಬಜೆಟ್ ನಿರಾಶಾದಾಯಕವಾಗಿದೆ ಎಂದು ಹೇಳಿದ್ದಾರೆ.