

ಬೀದರ್: ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್(ಎನ್‍ಎಸ್‍ಯುಐ) ವತಿಯಿಂದ ಮಹಾತ್ಮ ಗಾಂಧಿಜಿ ಹುತಾತ್ಮರಾದ ದಿನದ ಪ್ರಯುಕ್ತ ನಗರದ ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ಜೈ ಬಾಪೂ, ಜೈ ಸಂವಿಧಾನ, ಜೈ ಭೀಮ ಕಾರ್ಯಕ್ರಮ ನಡೆಯಿತು.
ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ವರುಣ್ ಚೌಧರಿ ಮಾತನಾಡಿ, ಮಹಾತ್ಮ ಗಾಂಧಿಜಿ ಅವರನ್ನು ಹತ್ಯೆ ಮಾಡಿದ್ದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಗಾಂಧಿಜಿ ಅವರ ವಿಚಾರಗಳನ್ನು ಹತ್ಯೆ ಮಾಡುವ ಕೆಲಸವೂ ಸಂಘ ಹಾಗೂ ಬಿಜೆಪಿಯಿಂದ ನಡೆಯುತ್ತಿದೆ ಎಂದು ಆರೋಪಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ನಿಷೇಧಿಸಬೇಕು. ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸರ್ಕಾರ ಮಹಾತ್ಮ ಗಾಂಧಿಜಿ ಅವರ ವಿಚಾರಗಳ ಮೇಲೆ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷೇಧಕ್ಕೆ ಒತ್ತಾಯಿಸಿ ಇದೇ ವೇಳೆ ಬೀದರ್ ಉಪ ವಿಭಾಗಾಧಿಕಾರಿ ಮಹಮ್ಮದ್ ಶಕೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ವಿದ್ಯಾರ್ಥಿ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಸಂಸದ ಸಾಗರ್ ಖಂಡ್ರೆ, ರಾಷ್ಟ್ರೀಯ ಸಂಯೋಜಕ ಮಹಮ್ಮದ್ ಫಿರೋಜ್ ಖಾನ್, ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ್, ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ಸಚಿನ್ ಮಲ್ಕಾಪುರ, ಪಶು ವೈದ್ಯಕೀಯ ವಿಶ್ವವಿದ್ಯಾಲಯ ಘಟಕದ ಅಧ್ಯಕ್ಷ ಇಮ್ರಾನ್ ಖಾನ್, ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ನಗರದ ನೂರ್ ಪದವಿಪೂರ್ವ ಕಾಲೇಜು ಬಳಿ ಫಿರೋಜ್ ಖಾನ್ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ವರುಣ್ ಚೌಧರಿ ಅವರನ್ನು ಸ್ವಾಗತಿಸಿ ಬರಮಾಡಿಕೊಂಡರು. ಅಲ್ಲಿಂದ ಅವರನ್ನು ತೆರೆದ ವಾಹನದಲ್ಲಿ ಬಸವೇಶ್ವರ ವೃತ್ತಕ್ಕೆ ಕರೆ ತರಲಾಯಿತು.
ಬಸವೇಶ್ವರ ವೃತ್ತದಿಂದ ಮಹಾವೀರ ವೃತ್ತ, ಭಗತ್‍ಸಿಂಗ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಕೈಯಲ್ಲಿ ಮಹಾತ್ಮ ಗಾಂಧಿಜಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ, ದೀವಟಿಗೆಯೊಂದಿಗೆ ಮೆರವಣಿಗೆ ಜರುಗಿತು.