

ಬೀದರ್: ವಿದ್ಯಾರ್ಥಿಗಳು ಭವಿಷ್ಯದಲ್ಲಿ ವಿಜ್ಞಾನಿಗಳಾಗಲು ಆಸಕ್ತಿ ತೋರಬೇಕು ಎಂದು ಪುಣೆಯ ಡಿಆರ್‍ಡಿಒ ವಿಜ್ಞಾನಿ ಸುಭೋದ್‍ಕುಮಾರ ನಾಯಕ್ ಹೇಳಿದರು.
ಭಾಲ್ಕಿ ತಾಲ್ಲೂಕಿನ ಕೇಸರಜವಳಗಾ ಗ್ರಾಮದ ಪಂಚಶೀಲ ಶಿಕ್ಷಣ ಸಂಸ್ಥೆ ಸಂಚಾಲಿತ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ವಿಜ್ಞಾನಿಗಳಾಗುವವರ ಸಂಖ್ಯೆ ಶೇ 1.5 ರಷ್ಟು ಮಾತ್ರ ಇದೆ. ಆದರೆ, ಅಮರಿಕದಲ್ಲಿ ಈ ಪ್ರಮಾಣ ಶೇ 58, ಜಪಾನ್‍ನಲ್ಲಿ ಶೇ 48 ಹಾಗೂ ಚೀನಾದಲ್ಲಿ ಶೇ 42 ರಷ್ಟು ಇದೆ ಎಂದು ತಿಳಿಸಿದರು.
ಭವಿಷ್ಯದ ವಿಜ್ಞಾನಿಗಳನ್ನು ರೂಪುಗೊಳಿಸುವ ದಿಸೆಯಲ್ಲಿ ಮೂಲ ವಿಜ್ಞಾನ, ವಿಜ್ಞಾನ ಹಾಗೂ ಸಂಶೋಧನೆಯಲ್ಲಿ ತೊಡಗಲು ವಿದ್ಯಾರ್ಥಿಗಳನ್ನು ಹುರಿದುಂಬಿಸಬೇಕು ಎಂದು ತಿಳಿಸಿದರು.
ಪ್ರತಿ ಮಗುವಿನಲ್ಲೂ ತನ್ನದೇ ಆದ ಬುದ್ಧಿ ಶಕ್ತಿ ಹಾಗೂ ಕೌಶಲ ಇರುತ್ತದೆ. ಶಿಕ್ಷಕರು ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಯೂ ಆದ ವಿಜ್ಞಾನಿ ವಿದ್ಯಾವತಿ ಎಸ್. ನಾಯಕ್ ಹೇಳಿದರು.
ಬಳಿಕ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿಜ್ಞಾನ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸಿದರು.
ಶಾಲೆಯ ಶಿಕ್ಷಕರಾದ ಭೀಮ ಎಳ್ಳೂರೆ, ಸಂಜೀವಕುಮಾರ ಕೊಬ್ಬರಗಡೆ, ರತ್ನಮ್ಮ ಪರಷಣೆ, ಪ್ರಭಾವತಿ ರೊಟ್ಟಿ, ಸಾಯಿನಾಥ ಗೋರೆ, ಮಹೇಶ್ ನವಾಡೆ, ಅಶ್ವಿನಿ ಕರಕಲೆ, ಶ್ರೀಕಾಂತ ಖೇಳಗೆ, ಮಹಾದೇವ ವಾಗೆ, ವಿಮಲ್ ಸೂರ್ಯವಂಶಿ, ಪ್ರಭುರಾವ್ ಮಂಗಣೆ, ಮಾಧವರಾವ್ ತಾಂಬೋಳೆ, ಬಾಬುರಾವ್ ಕರಕಲೆ, ಚಂದ್ರಪ್ಪ ಕರಕಲೆ, ಮಾರುತಿ ಸಾಗರ್, ರಮೇಶ ಕಾಣಕೇರ್, ವಿಜಯಲಕ್ಷ್ಮಿ ಪೂಜಾರಿ, ಧರ್ಮವೀರ ಪಾಟೀಲ, ಪಂಡಿತ ಕೋಳಿಕರ್, ದತ್ತಾತ್ರಿ, ಇಂದ್ರಜೀತ್ ಗುಪ್ತಾ, ಉತ್ತಮ ವಾಗೆ, ಶ್ರೀಧರ, ದಿಲೀಪ್ ಗಂಟೆ, ರಮೇಶ್ ಧೋಲಿ ಇದ್ದರು.