

ಬೀದರ್: ಕನ್ನಡಪರ ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳನ್ನು ಹಿಂಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಮುಧೋಳ ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ ಅವರ ನಿರ್ಣಯ ಕನ್ನಡದ ಬಗ್ಗೆ ಅವರಿಗಿರುವ ಕಾಳಜಿಯ ಪ್ರತೀಕ ಎಂದು ಹೇಳಿದ್ದಾರೆ.
ಕನ್ನಡ ನಾಮಫಲಕಕ್ಕಾಗಿ ಬೆಂಗಳೂರಿನಲ್ಲಿ ನಡೆದ ಹೋರಾಟದ ವೇಳೆ ವೇದಿಕೆ ರಾಜ್ಯ ಅಧ್ಯಕ್ಷ ನಾರಾಯಣಗೌಡರು 16 ದಿನ ಜೈಲುವಾಸ ಅನುಭವಿಸಿದ್ದರು. ಬೀದರ್ ಜಿಲ್ಲಾ ಘಟಕದ ಐವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದವು. ಆದರೆ, ಮುಖ್ಯಮಂತ್ರಿ ಅವರು ಕನ್ನಡ ನಾಮಫಲಕ ಕಡ್ಡಾಯಕ್ಕೆ ಕಾಯ್ದೆ ರೂಪಿಸಿ ಜಾರಿಗೊಳಿಸಿದ್ದು ಎಲ್ಲ ನೋವನ್ನು ಮರೆಸಿತು ಎಂದು ಹೇಳಿದ್ದಾರೆ.
ಕನ್ನಡಿಗರ ಬದುಕನ್ನು ಹೊರ ರಾಜ್ಯದಿಂದ ಬಂದವರು ಕಿತ್ತುಕೊಳ್ಳುತ್ತಿದ್ದಾರೆ. ಕರ್ನಾಟಕದ ಉದ್ಯಮ, ಉದ್ಯೋಗಗಳು ಕನ್ನಡಿಗರ ಕೈ ತಪ್ಪುತ್ತಿವೆ. ಇದನ್ನೆಲ್ಲ ನಿಗ್ರಹಿಸಲು ಕಾಯ್ದೆ ರೂಪಿಸಬೇಕಿದೆ. ಸಿದ್ದರಾಮಯ್ಯ ಅವರಿಂದಲೇ ಇದು ಸಾಧ್ಯವಿದೆ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಅವರು ಪ್ರಕರಣ ವಾಪಸ್ ಪಡೆಯುವ ಮಾತನ್ನು ಉಳಿಸಿಕೊಳ್ಳುತ್ತಾರೆಂಬ ವಿಶ್ವಾಸವಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಕೃತಜ್ಞತೆ ತಿಳಿಸಿದ್ದಾರೆ.