

ಬೀದರ್: ಇಲ್ಲಿಯ ನಾಟ್ಯಶ್ರೀ ನೃತ್ಯಾಲಯದ ವತಿಯಿಂದ ಕೊಡಲಾಗುವ 2025ನೇ ಸಾಲಿನ ನಾಟ್ಯಶ್ರೀ ಪ್ರಶಸ್ತಿಗೆ ಬಾಗಲಕೋಟೆಯ ಕಲಾವಿದೆ ಶುಭದಾ ಗುರುರಾಜ ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದಲ್ಲಿ ಸಭೆ ನಡೆಸಿದ ನೃತ್ಯಾಲಯದ ಅಧ್ಯಕ್ಷೆ ರಾಣಿ ಸತ್ಯಮೂರ್ತಿ ನೇತೃತ್ವದ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ, ಪ್ರತಿಭಾ ಚಾಮಾ, ವೀರಶೆಟ್ಟಿ ಮೈಲೂರಕರ್ ಹಾಗೂ ಶಂಭುಲಿಂಗ ವಾಲ್ದೊಡ್ಡಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಪ್ರಶಸ್ತಿಗೆ ಅವರ ಹೆಸರು ಅಂತಿಮಗೊಳಿಸಿತು.
ಪ್ರಶಸ್ತಿಯು ಪ್ರಶಸ್ತಿ ಪತ್ರ ಹಾಗೂ ರೂ. 15 ಸಾವಿರ ನಗದು ಹೊಂದಿದೆ. ಫೆಬ್ರುವರಿ 8 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಣಿ ಸತ್ಯಮೂರ್ತಿ ತಿಳಿಸಿದರು.
ಶುಭದಾ ನೃತ್ಯಾಲಯದ ಏಳನೇ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಂಭುಲಿಂಗ ವಾಲ್ದೊಡ್ಡಿ (ಸಂಗೀತ), ದಿಲೀಪ್ ಕಾಡವಾದ (ಸಂಗೀತ), ರಮೇಶ ಕೊಳಾರ (ಸಂಗೀತ), ವಿಜಯಪುರದ ರಂಗನಾಥ ಬತಾಸಿ (ಕಥಕ್ ನೃತ್ಯ), ಕಲಬುರಗಿಯ ಅನಂತ ಕೆ. ಚಿಂಚನಸೂರು (ಭರತನಾಟ್ಯ), ಮಂಗಳೂರಿನ ಕಮಲಾ ಭಟ್ (ಭರತನಾಟ್ಯ) ಈ ಹಿಂದೆ ಪ್ರಶಸ್ತಿಗೆ ಭಾಜನರಾಗಿದ್ದಾರೆ.