

ಬೀದರ್: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ನಿಮಿತ್ತ ಬಿಜೆಪಿ ವತಿಯಿಂದ ಫೆ.14ರಿಂದ ಮಾ.14 ರವರೆಗೆ ಒಂದು ತಿಂಗಳು ಜಿಲ್ಲಾದ್ಯಂತ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ವಾಜಪೇಯಿ ಅವರು ದೇಶಕಂಡ ಅಪ್ರತಿಮ ನಾಯಕ. ಹಲವು ಮಹಾತ್ವಾಕಾಂಕ್ಷೆಗಳನ್ನು ಇಟ್ಟುಕೊಂಡು ಭಾರತವನ್ನು ಮುನ್ನಡೆಸಿದ ಮಂತ ನಾಯಕರಾಗಿದ್ದರು. ಅವರೊಬ್ಬ ವ್ಯಕ್ತಿಯಲ್ಲ ಶಕ್ತಿಯಾಗಿದ್ದರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್ ಹೇಳಿದರು.
1924ರ ಡಿ.25 ರಂದು ಗ್ವಾಲಿಯರ್ ನಲ್ಲಿ ಜನಿಸಿದ ವಾಜಪೇಯಿ ಅವರು, ಪಾಂಚಜನ್ಯ ಪತ್ರಿಕೆಯ ಸಂಪಾದಕರಾಗಿದ್ದರು. ಸಾಹಿತಿಗಳಾಗಿದ್ದರು. ಪೋಖ್ರಾನ್ ಪರಮಾಣು ಪರೀಕ್ಷೆ ನಡೆಸುವ ಮೂಲಕ ಪ್ರಪಂಚಕ್ಕೆ ತಾನೊಂದು ಪ್ರಬಲ ರಾಷ್ಟ್ರ ಎಂಬ ಸಂದೇಶ ರವಾನಿಸಿದ ಕೀರ್ತಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಅವರ ಪ್ರಧಾನಿಯಾಗಿದ್ದಾಗ ಸುವರ್ಣ ಚತುಷ್ಪಥ ರಸ್ತೆ ನಿರ್ಮಾಣ, ಸರ್ವ ಶಿಕ್ಷಣ ಅಭಿಯಾನದ ಮೂಲಕ ಸರ್ಕಾರಿ ಶಾಲೆಗಳಿಗೆ ಹೊಸ ರೂಪ ನೀಡಿದ್ದರು. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ರೈತರಿಗೆ ಕಿಸಾನ್ ಕ್ರೆಡಿಟ್ ಕಾಡ್೯, ಕಾರ್ಗಿಲ್ ವಿಜಯ, ಹಳ್ಳಿಗಳ ಅಭಿವೃದ್ಧಿ ಸಂಕಲ್ಪ ಹೊತ್ತಿದ್ದರು. ನದಿಗಳ ಜೋಡಣೆ ಅಟಲ್ಜಿ ಅವರ ಬಹುದೊಡ್ಡ ಕನಸಾಗಿತ್ತು. ಅವರ ಮಾರ್ಗದಲ್ಲಿ ಸಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಹೀಗಾಗಿ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಸರ್ವರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ವಾಜಪೇಯಿ ಕವಿಗಳಾಗಿದ್ದರು. ಹೀಗಾಗಿ ಜಿಲ್ಲೆಯಲ್ಲಿ ಕವಿ ಸಮ್ಮೇಳನ, ಪತ್ರಕರ್ತ ಕಾರ್ಯಕ್ರಮ, ವಾಕ್ಥಾನ್ ಹೀಗೆ ನಾನಾ ಕಾರ್ಯಕ್ರಮಗಳನ್ನು ಒಂದು ತಿಂಗಳವರೆಗೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಬೀದರ್ನಲ್ಲಿ ಇತ್ತೀಚೆಗೆ ನಡೆದ ದರೋಡೆ ಹಾಗೂ ಶೂಟೌಟ್ ಪ್ರಕರಣದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದಾರೆ. ಈ ಘಟನೆ ನಂತರ ನಗರದಲ್ಲಿ ಮನೆ ಕಳ್ಳತನಗಳು ಹೆಚ್ಚಾಗಿವೆ. ಈಗಿರುವ ಹಿರಿಯ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕು ಎಂದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಪ್ರಮುಖರಾದ ಗುರುನಾಥ ಜ್ಯಾಂತಿಕರ್, ವೀರು ದಿಗ್ವಾಲ್, ಶ್ರೀನಿವಾಸ ಚೌಧರಿ ಇದ್ದರು.
ಬಾಬು ವಾಲಿ ಸಂಯೋಜಕ
ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ ಆಚರಣೆ ಸಮಿತಿ ರಚಿಸಲಾಗಿದ್ದು, ಬಿಡಿಎ ಮಾಜಿ ಅಧ್ಯಕ್ಷ ಬಾಬಾ ವಾಲಿ ಅವರನ್ನು ಸಮಿತಿ ಜಿಲ್ಲಾ ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಮುಖಂಡರಾದ ಕಿರಣ್ ಪಾಟೀಲ್ ಮತ್ತು ವೀರು ದಿಗ್ವಾಲ್ ಅವರನ್ನು ಸಮಿತಿಯ ಸಹ ಸಂಯೋಜಕರಾಗಿ ನೇಮಿಸಲಾಗಿದೆ.