

ಬೀದರ್: ಭಾರತ ಸುಭದ್ರ ಮತ್ತು ಸಮೃದ್ಧಿಯಾಗಿ ಬೆಳೆಯಲು ಮೂಲ ಆಧಾರ ಸಂವಿಧಾನ. ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನದ ಆಶಯಗಳನ್ನು ಅರಿತು ನಡೆಯಬೇಕು ಎಂದು ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ ಬಿರಾದಾರ್ ಚಿದ್ರಿ ಹೇಳಿದರು.
ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಹಾಗೂ ಕಾರಾಗೃಹ ಮತ್ತು ಸೇವಾ ಸುಧಾರಣೆ ಇಲಾಖೆಯಿಂದ ನಗರದ ಕಾರಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನ ಒಂದು ಪುಸ್ತಕ ಅಲ್ಲ. ಅದು ನಮ್ಮ ಜೀವನದ ವಿಧಾನ, ಬದುಕಿನ ಒಂದು ಕ್ರಮವಾಗಿದೆ ಎಂದು ಹೇಳಿದರು.
ದುಡುಕಿನಿಂದ ಅಪರಾಧ ಮಾಡಿ, ಕುಟುಂಬದಿಂದ ದೂರವಿರುವ ಕೈದಿಗಳು ಮನ ಪರಿವರ್ತನೆ ಹೊಂದಬೇಕು. ತಪ್ಪು ಮಾನವನ ಸಹಜ ಗುಣ. ಆದರೆ ಅದನ್ನು ಮತ್ತೆ ಮಾಡಬಾರದು. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿ ಮುಂದೆ ಹೀಗೆ ಆಗದಂತೆ ನೋಡುಕೊಳ್ಳುವುದು ಮುಖ್ಯ ಎಂದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತೂಗಾಂವೆ ಮಾತನಾಡಿ, ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವವರು ಹಿಂದೆ ಮಾಡಿದ ತಪ್ಪನ್ನು ಅರಿತು ಜೀವನ ಸುಧಾರಿಸಿಕೊಳ್ಳಬೇಕು ಎಂದು ಹೇಳಿದರು.
ರಾಜ್ಯ ಪರಿಷತ್ ಸದಸ್ಯರಾದ ರಾಜಕುಮಾರ ಮಾಳಗೆ ಮಾತನಾಡಿ, ಎಲ್ಲ ಸಮಸ್ಯೆಗಳಿಗೆ ಸಂವಿಧಾನದಲ್ಲಿ ಪರಿಹಾರವಿದೆ ಎಂದು ಹೇಳಿದರು.
ಕಾರಾಗೃಹ ಅಧೀಕ್ಷಕ ದತ್ತಾತ್ರೇಯ ಎಸ್. ಮೇಧಾ ಅಧ್ಯಕ್ಷತೆ ವಹಿಸಿದ್ದರು. ಸೂರ್ಯಕಾಂತ ಬಿರಾದಾರ್, ಶಿವರಾಜ ಕಪಲಾಪುರೆ, ಶ್ರೀಕಾಂತ ಪಾಟೀಲ್, ಮಕರಂದ ಕುಲಕರ್ಣಿ, ದಿಲಿಪಕುಮಾರ ಡೊಂಗರಗೆ, ಶಿವಶಂಕರ ಟೊಕರೆ ಇತರರಿದ್ದರು. ಸಿದ್ದಣ್ಣಗೌಡ ಪಾಟೀಲ್ ಸ್ವಾಗತಿಸಿದರು. ಸುರೇಶ ಟಾಳೆ ನಿರೂಪಣೆ ಮಾಡಿದರು.