

ಬೀದರ್: ಸ್ಥಗಿತಗೊಂಡಿರುವ ಬೀದರ್ ವಿಮಾನಯಾನ ಸೇವೆಯನ್ನು ಮಾರ್ಚ್ ಮೊದಲ ವಾರದಲ್ಲಿ ಮತ್ತೆ ಆರಂಭಗೊಳ್ಳುವ ವಿಶ್ವಾಸ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ಸ್ಟಾರ್ ಏರ್‌ಲೈನ್ ಸಂಸ್ಥೆ ಜತೆಗೆ ಜಿಲ್ಲಾಧಿಕಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ. ಸೇವೆ ಆರಂಭಕ್ಕೆ ಸಂಸ್ಥೆ ಸಮಯ ಕೇಳುತ್ತಿದ್ದು, ಮಾರ್ಚ್ ನಲ್ಲಿ ಹಾರಾಟ ಆರಂಭಿಸುವ ನಂಬಿಕೆ ಇದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಮಾನಯಾನ ಸೌಲಭ್ಯ ಆರಂಭ ಸಂಬಂಧ ಈಗಾಗಲೇ ರಾಜ್ಯ ಸಕಾರ ಮ್ಯಾಕ್ರೋ ಯೋಜನೆಯಡಿ 15 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಬೀದರ್-ಬೆಂಗಳೂರಿಗೆ ವಿಮಾನ ಹಾರಾಟಕ್ಕೆ ಮುಂದಾಗಿರುವ ಸ್ಟಾರ್ ಏರ್ ಲೈನ್ಸ್ ಡಿಸೆಂಬರ್ನಲ್ಲೇ ಸೇವೆ ಆರಂಭಿಸುವ ಭರವಸೆ ನೀಡಿತ್ತು. ನಂತರ ಜ. 26ಕ್ಕೆ ಹಾರಾಟ ಶುರು ಮಾಡಲಾಗುವುದು ಎಂದು ಹೇಳಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ವಿಮಾನಗಳ ಕೊರತೆ ಎದುರಾಗುತ್ತಿರುವುದು ವಿಳಂಬಕ್ಕೆ ಕಾರಣ ಆಗಿದೆ ಎಂದು ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಿರ್ಮಾಣ ಹಂತದಲ್ಲಿರುವ ಬಸವಕಲ್ಯಾಣದ ಅನುಭವ ಮಂಟಪಕ್ಕೆ ರಾಜ್ಯ ಸರ್ಕಾರ ಈಗಾಗಲೇ 100 ಕೋಟಿ ರೂ. ಅನುದಾನ ನೀಡಿದ್ದು, ಮಾರ್ಚ್ ವರೆಗೆ ಇನ್ನೂ 50 ಕೋಟಿ ರೂ. ಬೇಡಿಕೆ ಇದೆ. ಈ ಬಗ್ಗೆ ಸಿಎಂ ಜತೆಗೆ ಚರ್ಚೆ ನಡೆಸಿದ್ದು, ಆರ್ಥಿಕ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಲಮೀತಿಯಲ್ಲಿ ಭವನದ ಕೆಲಸ ಮುಗಿಸಿ ಉದ್ಘಾಟನೆ ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಔರಾದ್ ತಾಲೂಕಿನ 36 ಕೆರೆಗಳು ತುಂಬಿಸುವ ಯೋಜನೆ ಮತ್ತು ಮೇಹಕರ್ ಏತ ನೀರಾವರಿ ಸೇರಿದಂತೆ 504 ಕೋಟಿ ರೂ.ಗಳ ವಿವಿಧ ಯೋಜನೆಗಳು ಟೆಂಡರ್ ಪ್ರಕ್ರಿಯೆ ಮುಗಿಯುವ ಹಂತದಲ್ಲಿವೆ. ಶೀಘ್ರ ಶಂಕು ಸ್ಥಾಪನೆ ನೆರವೇರಿಸಲಾಗುವುದು. ಜಿಲ್ಲೆಯಲ್ಲಿ ನಡೆಯುತ್ತಿರುವ ಸಾವಿರ ಕೋಟಿ ರೂ. ವೆಚ್ಚದ ಕಾರ್ಯಕ್ರಮಗಳನ್ನು ಮಾರ್ಚ್ ನಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಲೋಕಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷ ಮಹ್ಮದ್ ಗೌಸೊದ್ದೀನ್, ಜಿಲ್ಲಾಕಾರಿ ಶಿಲ್ಪಾ ಶರ್ಮಾ, ಸಿಇಒ ಡಾ.ಗಿರೀಶ್ ಬದೋಲೆ, ಎಸ್ಪಿ ಪ್ರದೀಪ್ ಗುಂಟಿ, ಡಿಎಫ್ಒ ವಾನತಿ ಇದ್ದರು.