ಮುತ್ತಂಗಿ ಇನ್ನು ನಿರಂತರ ನೀರು ಸರಬರಾಜು ಗ್ರಾಮ

Muttangi 24X7 Water Suppy Village Photo-1 - Copy
Published on

ಬೀದರ್: ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿ ಗ್ರಾಮ ಈಗ ನಿರಂತರ ನೀರು ಸರಬರಾಜು ಗ್ರಾಮವಾಗಿದೆ.

ದಿನದ 24 ಗಂಟೆ ಶುದ್ಧ ಕುಡಿಯುವ ನೀರು ಲಭಿಸುವ ರಾಜ್ಯದ ಆರನೇ ಹಾಗೂ ಬೀದರ್ ಜಿಲ್ಲೆಯ ಎರಡನೇ ಗ್ರಾಮವೆಂಬ ಹಿರಿಮೆಗೆ ಪಾತ್ರವಾಗಿದೆ.

ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಗ್ರಾಮವನ್ನು ನಿರಂತರ ನೀರು ಸರಬರಾಜು ಗ್ರಾಮವೆಂದು ಘೋಷಣೆ ಮಾಡಿದರು.

ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮ ನಿರಂತರ ನೀರು ಸರಬರಾಜು ಗ್ರಾಮ ಆಗಿರುವುದು ಸಂತಸ ಉಂಟು ಮಾಡಿದೆ. ಕ್ಷೇತ್ರದಲ್ಲಿ ಇನ್ನೂ 5 ಗ್ರಾಮಗಳನ್ನು ದಿನದ 24 ಗಂಟೆ ನೀರು ಪೂರೈಕೆ ಗ್ರಾಮಗಳನ್ನಾಗಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮಸ್ಥರು ನೀರನ್ನು ಹಿತ ಮಿತವಾಗಿ ಬಳಸಬೇಕು. ಮಾಸಿಕ ಶುಲ್ಕ ತಪ್ಪದೆ ಪಾವತಿಸಬೇಕು. ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.

ಜಲ ಜೀವನ ಮಿಷನ್ ರಾಜ್ಯ ಯೋಜನಾ ಸಮನ್ವಯಾಧಿಕಾರಿ ಡಾ. ನಂದಕುಮಾರ ತಾಂದಳೆ ಮಾತನಾಡಿ, ಯೋಜನೆಯಡಿ ಗ್ರಾಮದ ಪ್ರತಿ ಮನೆಯ ನಲ್ಲಿಗೆ ಮೀಟರ್ ಅಳವಡಿಸಲಾಗಿದೆ. ಪ್ರತಿ ನಲ್ಲಿಗೆ ನಿಮಿಷಕ್ಕೆ 9 ಲೀಟರ್ ಶುದ್ಧ ನೀರು ಪೂರೈಕೆಯಾಗಲಿದೆ. ಪ್ರತಿ ವ್ಯಕ್ತಿಗೆ ನಿತ್ಯ 55 ಲೀಟರ್ ನೀರು ದೊರೆಯಲಿದೆ ಎಂದು ತಿಳಿಸಿದರು.

ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ಸ್ವಸಹಾಯ ಗುಂಪುಗಳನ್ನು ಬಳಸಿಕೊಳ್ಳಬೇಕು. ಗ್ರಾಮಸ್ಥರು ನೀರು ಪೋಲಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಹುಮನಾಬಾದ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶೇಖರ್ ರಾಗಾ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಜಲಜೀವನ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಮದ ಜಲ ಜೀವನ ಮಿಷನ್ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಪ್ರಥಮ ದರ್ಜೆ ಗುತ್ತಿಗೆದಾರ ರಾಜೇಶ್ವರ ವಿ. ಗುಜ್ಜಲವಾರ್ ಅವರಿಗೆ ಪ್ರಶಂಸಾ ಪತ್ರ ಪ್ರದಾನ ಮಾಡಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಜಗನ್ನಾಥ ಅಧ್ಯಕ್ಷತೆ ವಹಿಸಿದ್ದರು. ಜೆಜೆಎಂ ಜಿಲ್ಲಾ ಯೋಜನಾ ವ್ಯವಸ್ಥಾಪಕ ಪೆತ್ರೂ, ಎಂಜಿನಿಯರ್‍ಗಳಾದ ಗೋರಕನಾಥ, ಪಿರಾಜಿ, ಓಂಕಾರ, ಅನಿಲ್, ಅಮರನಾಥ, ಶಶಿಕುಮಾರ, ಜಗನ್ನಾಥ ಮಜಗೆ ಇದ್ದರು.

ಪಿಡಿಒ ಸವಿತಾ ಬುಯ್ಯಾ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪರಶುರಾಮ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net