

ಬೀದರ್: ಮಂಗಳೂರಿನಲ್ಲಿ ಈಚೆಗೆ ನಡೆದ ಪ್ರಥಮ ಸೌತ್ ಏಷ್ಯಾ ಮಾಸ್ಟರ್ಸ್ ಒಪೆನ್ ಚಾಂಪಿಯನ್‍ಶಿಪ್‍ನ 35 ವರ್ಷ ಮೇಲ್ಪಟ್ಟವರ ವಿಭಾಗದ 5 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಬೀದರ್‍ನ ಜಿಲ್ಲಾ ಕಾರಾಗೃಹದ ಮುಖ್ಯಶಿಕ್ಷಕಿ ಮಮಿತಾಬಾಯಿ ಕದ್ರೆ ಪ್ರಥಮ ಸ್ಥಾನ ಗಳಿಸಿ ಸಾಧನೆಗೈದಿದ್ದಾರೆ.
26:01:4 ನಿಮಿಷದಲ್ಲಿ ಅವರು ಗೆಲುವಿನ ದಡ ತಲುಪಿದರು. 30 ವರ್ಷ ಮೇಲ್ಪಟ್ಟವರ ವಿಭಾಗದ 4*400 ಮೀಟರ್ ರಿಲೆನಲ್ಲೂ ಅವರು ದ್ವಿತೀಯ ಸ್ಥಾನ ಗಳಿಸಿ ಗಮನ ಸೆಳೆದರು.
ವೃತ್ತಿ ಜತೆಗೆ ಕ್ರೀಡೆಯಲ್ಲೂ ತೊಡಗಿಸಿಕೊಂಡಿರುವ ಮಮಿತಾಬಾಯಿ ವಿವಿಧ ಸ್ಪರ್ಧೆಗಳಲ್ಲಿ ಚಿನ್ನ, ಬೆಳ್ಳಿ ಪದಕಗಳನ್ನು ಗಳಿಸಿ ಪ್ರತಿಭೆ ಪ್ರದರ್ಶಿಸಿದ್ದಾರೆ. ಇದೀಗ ಭಾರತ, ನೇಪಾಳ್, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಭೂತಾನ್ ಸೇರಿ ಐದು ದೇಶಗಳ ಸ್ಪರ್ಧಿಗಳು ಪಾಲ್ಗೊಂಡಿದ್ದ ಚಾಂಪಿಯನ್‍ಶಿಪ್‍ನಲ್ಲಿ ಸಾಧನೆಗೈದು ಬೀದರ್‍ನ ಹಿರಿಮೆ ಹೆಚ್ಚಿಸಿದ್ದಾರೆ. ಮಮಿತಾಬಾಯಿ ಕದ್ರೆ ಅವರ ಸಾಧನೆಗೆ ಅನೇಕರು ಸಂತಸ ವ್ಯಕ್ತಪಡಿಸಿ ಅಭಿನಂದನೆ ತಿಳಿಸಿದ್ದಾರೆ.