

ಬೀದರ್: ಭಾರತೀಯ ಸಂಸ್ಕೃತಿ ಉತ್ಸವ-7 ಹಾಗೂ ಕೊತ್ತಲ ಸ್ವರ್ಣ ಜಯಂತಿ ನಿಮಿತ್ತ ಬಸವ ರಥಕ್ಕೆ ನಗರದಲ್ಲಿ ಜ.21ರಂದು ಚಾಲನೆ ನೀಡಲಾಗುವುದು ಎಂದು ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಹೇಳಿದರು.
ಉತ್ಸವ ಪ್ರಚಾರ ನಿಮಿತ್ತ ಕಲ್ಯಾಣ ಕನರ್ಾಟಕದ ಏಳು ಜಿಲ್ಲೆಗಳಿಂದ ರಥಯಾತ್ರೆ ಆರಂಭಿಸಲಾಗುತ್ತಿದೆ. ಈ ರಥಗಳು ಎಲ್ಲ ತಾಲೂಕುಗಳಲ್ಲಿ ಪ್ರಚಾರ ಮಾಡಿ ಉತ್ಸವದಲ್ಲಿ ಸಮಾವೇಶಗೊಳ್ಳಲಿವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜ.21ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಗಣೇಶ ಮೈದಾನದಲ್ಲಿ ಪೂಜ್ಯರ ಸಮ್ಮುಖದಲ್ಲಿ ರಥಕ್ಕೆ ಚಾಲನೆ ನೀಡಲಾಗುವುದು. ಅಂದು ಬೀದರ್ ತಾಲೂಕು, ಜ.22ರಂದು ಕಮಲನಗರ, 23ಕ್ಕೆ ಔರಾದ್, 24ಕ್ಕೆ ಭಾಲ್ಕಿ, 25ರಂದು ಬಸವಕಲ್ಯಾಣ, 26ಕ್ಕೆ ಹುಮನಾಬಾದ್ ತಾಲೂಕಿನಲ್ಲಿ ಪ್ರಚಾರ ಮಾಡಲಾಗುವುದು. 27ರಂದು ಚಿಟಗುಪ್ಪ ತಾಲೂಕು ಮೂಲಕ ಸೇಡಂಗೆ ತೆರಳಿ ಸಮಾವೇಶಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ಜಿಲ್ಲೆಯ ಬೀರನಹಳ್ಳಿ ಕ್ರಾಸ್ ಬಳಿ ಜ.28ರಿಂದ ಫೆ.6ರವರೆಗೆ ಉತ್ಸವ ಆಯೋಜಿಸಿದ್ದು, 30 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಜಿಲ್ಲೆಯಿಂದ ಐದು ಲಕ್ಷ ಜನ ಪಾಲ್ಗೊಳ್ಳಲಿದ್ದಾರೆ. ಉತ್ಸವದಲ್ಲಿ ಭಾಗವಹಿಸುವವರಿಗಾಗಿ ವಸತಿಸಹಿತ ಸೌಲಭ್ಯ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.
ಪತಂಜಲಿ ಯೋಗ ಸಮಿತಿ ಪ್ರಮುಖ ಯೋಗೇಂದ್ರ ಯದಲಾಪುರೆ ಮಾತನಾಡಿ, ಉತ್ಸವದಲ್ಲಿ ಫೆ.2ರಂದು ಆಹಾರ-ಆರೋಗ್ಯ ಸಮಾವೇಶದಲ್ಲಿ ಯೋಗ ಗುರು ಬಾಬಾ ರಾಮದೇವ ಪಾಲ್ಗೊಳ್ಳಲಿದ್ದಾರೆ. ಬೆಳಗ್ಗೆ 6ಕ್ಕೆ ಲಕ್ಷಾಂತರ ಜನರ ಸಮ್ಮುಖ ಯೋಗ ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.
ಸಾವಯವ ಕೃಷಿ ಪ್ರಮುಖ ಮಹಾದೇವ ನಾಗೂರೆ ಮಾತನಾಡಿ, 12 ಎಕರೆ ಜಾಗದಲ್ಲಿ ಕೃಷಿ ಪ್ರಾತ್ಯಕ್ಷಿಕೆ ನಡೆಯಲಿದೆ. ಫೆ.1ರಂದು ಗ್ರಾಮ-ಕೃಷಿ ಸಮಾವೇಶವಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂತೋಷ ಮಂಗಳೂರು, ಮಹಾದೇವ ಸ್ವಾಮಿ, ಗಣೇಶ ಇತರರಿದ್ದರು.