

ಬೀದರ್: ಜಗತ್ತಿನಲ್ಲೇ ಅಲ್ಪಸಂಖ್ಯಾತರಿಗೆ ಸುರಕ್ಷಿತವಾದ ಸ್ಥಳ ಭಾರತ ಎಂದು ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಅಧ್ಯಕ್ಷ ಸರ್ದಾರ್ ಇಕ್ಬಾಲ್ ಸಿಂಗ್ ಲಾಲಪುರಾ ಹೇಳಿದರು.
ಗುರುನಾನಕ್ ದೇವ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೀ ನಾನಕ್ ಝಿರಾ ಸಾಹೇಬ್ ಫೌಂಡೇಷನ್ ಆಯೋಜಿಸಿದ್ದ ಸಮಾರಂಭದಲ್ಲಿ ಸರ್ದಾರ್ ಜೋಗಾ ಸಿಂಗ್ ಕಲ್ಯಾಣ ಕರ್ನಾಟಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಧಾರ್ಮಿಕ ಅಲ್ಪಸಂಖ್ಯಾತರಿಗೆ ಸುಲಭವಾಗಿ, ತೊಂದರೆ ಇಲ್ಲದೆ ಜೀವನ ನಡೆಸಲು ಅನುಕೂಲವಾಗಿರುವಂಥ ವಿಶ್ವದ ರಾಷ್ಟ್ರಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ ಎಂದರು.
ಪಾಕಿಸ್ತಾನದಲ್ಲಿ ಸ್ವಾತಂತ್ರ್ಯ ಸಿಕ್ಕಿದ ವೇಳೆ ಅಲ್ಲಿ ಶೇ.22 ಇದ್ದ ಅಲ್ಪಸಂಖ್ಯಾತರ ಸಂಖ್ಯೆ ಪ್ರಸ್ತುತ ಶೇ.6ಕ್ಕೆ ಕುಸಿದಿದೆ. ಬಾಂಗ್ಲಾದೇಶದಲ್ಲೂ ಶೇ.28ರಿಂದ ಶೇ.12ಕ್ಕೆ ಇಳಿಕೆಯಾಗಿದೆ. ಆದರೆ ಭಾರತ ದೇಶದಲ್ಲಿ ಅಲ್ಪಸಂಖ್ಯಾತರ ಸಂಖ್ಯೆ ದಿನೇದಿನೆ ಹೆಚ್ಚಳವಾಗುತ್ತಿದೆ. ಅಲ್ಲದೆ ಇಲ್ಲಿನ ಅಲ್ಪಸಂಖ್ಯಾತರಿಗೆ ಸರ್ಕಾರ ಎಲ್ಲ ರೀತಿಯ ಮೂಲಸೌಲಭ್ಯ ಒದಗಿಸುತ್ತಿದೆ. ಇಂಥ ಭೂಮಿಯಲ್ಲಿ ಅಲ್ಪಸಂಖ್ಯಾತರು ಸುರಕ್ಷಿತವಾಗಿದ್ದಾರೆ ಎಂದು ಹೇಳಿದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಮಾತನಾಡಿ, ಗುರುನಾನಕ್ ಸಂಸ್ಥೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಅಗತ್ಯ ಸೌಲಭ್ಯ ನೀಡಲಾಗುವುದು ಎಂದು ಭರವಸೆ ನೀಡಿದರು.
ಗುರುನಾನಕ್ ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ಡಾ.ರೇಷ್ಮಾ ಕೌರ್ ಮಾತನಾಡಿ, ನಾನಕ್ ಫೌಂಡೇಷನ್ ಸಂಸ್ಥಾಪಕ ದಿ.ಸರ್ದಾರ್ ಜೋಗಾಸಿಂಗ್ ಜನ್ಮದಿನ ನಿಮಿತ್ತ ವಿವಿಧ ಕ್ಷೇತ್ರದ ಸಾಧಕರಿಗೆ ಜೋಗಾಸಿಂಗ್ ಕಲ್ಯಾಣ ಕರ್ನಾಟಕ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿ ಆಯ್ಕೆಗಾಗಿ ಸಮಿತಿ ರಚಿಸಿ ದೇಶದ ವಿವಿಧ ಕ್ಷೇತ್ರಗಳ ಒಂಬತ್ತು ಸಾಧಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ತಿಳಿಸಿದರು.
ಶ್ರೀ ನಾನಕ್ ಝೀರಾ ಸಾಹೇಬ್ ಫೌಂಡೇಷನ್ ಅಧ್ಯಕ್ಷ ಡಾ.ಎಸ್.ಬಲಬೀರಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಸರ್ದಾರ್ ನಾನಕ್ ಸಿಂಗ್, ಡಾ.ಸಿ. ಮನೋಹರ, ಪುನೀತ್ ಸಿಂಗ್, ಪವೀತ್ ಸಿಂಗ್, ಪ್ರಾಚಾರ್ಯ ಡಾ.ಎಂ. ಧನಂಜಯ ಇತರರಿದ್ದರು.
ಸಾಧಕರಿಗೆ ಜೋಗಾಸಿಂಗ್ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರದ ಸಾಧಕರಿಗೆ ಸರ್ದಾರ್ ಜೋಗಾಸಿಂಗ್ಜಿ ಕಲ್ಯಾಣ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗ ಅಧ್ಯಕ್ಷ ಸರ್ದಾರ್ ಇಕ್ಬಾಲ್ ಸಿಂಗ್ ಲಾಲಪುರಾ (ಉತ್ಕೃಷ್ಟತಾ ಸೇವಾರತ್ನ), ಕರ್ನಾಟಕ ಹೈಕೋರ್ಟ್ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಪಿ.ಎಸ್. ದಿನೇಶಕುಮಾರ (ನ್ಯಾಯ ರತ್ನ), ಡಾ.ಅನೀಲ ಡಿ.ಸಹಸ್ತ್ರಬುದ್ದೆ (ಶೈಕ್ಷಣಿಕ ಶ್ರೇಷ್ಠತೆ), ಅಮರನಾಥ ಜುಲೂರಿ (ಪ್ರಮುಖ ಹಳೆಯ ವಿದ್ಯಾರ್ಥಿ), ಡಾ.ದೇವಿ ಪ್ರಸಾದಶೆಟ್ಟಿ (ಆರೋಗ್ಯ ರತ್ನ), ಭಾಯಿಸಾಹೇಬ್ ಪ್ರೊ.ಮೋಹಿಂದ್ರಸಿಂಗ್ ಅಹುವಾಲಿಯಾ (ಸೇವಾ ರತ್ನ), ಡಾ.ಮುದ್ದು ಮೋಹನ್ (ಸಂಗೀತ ರತ್ನ), ಪೂಜಾ ಶರ್ಮಾ (ಸಮಾಜ ಸೇವಕಿ), ಡಾ.ವಿವೇಕ ಜವಳಿ (ವೈದ್ಯ ರತ್ನ) ಪ್ರಶಸ್ತಿ ಸ್ವೀಕರಿಸಿದರು.