ಕುಡಿದು ವಾಹನ ಓಡಿಸಿದರೆ ರೂ.10 ಸಾವಿರ ದಂಡ

bvb collage
Published on

ಬೀದರ್: ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ಮತ್ತು ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಜಿ.ಕೆ. ಬಿರಾದಾರ್ ಹೇಳಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಬಿವಿಬಿ ಪದವಿ ಮತ್ತು ಪದವಿಪೂರ್ವ ಕಾಲೇಜು ಹಾಗೂ ಬೀದರ್ ಮೋಟಾರು ವಾಹನ ತರಬೇತಿ ಚಾಲನೆ ಸಂಘದ ಸಹಯೋಗದಡಿ ನಗರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ವಾಹನ ಚಾಲಕರು ಕಡ್ಡಾಯವಾಗಿ ಸೀಟ್ ಬೆಲ್ಟ್, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಮನೆಯಿಂದ ಶಾಲಾ-ಕಾಲೇಜುಗಳಿಗೆ 10 ನಿಮಿಷ ಮುಂಚಿತವಾಗಿ ಹೊರಡಬೇಕು. ದೇಶದಲ್ಲಿ ಪ್ರತಿವರ್ಷ ಒಂದು ಲಕ್ಷಕ್ಕಿಂತ ಅಧಿಕ ಜನರು ರಸ್ತೆ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ಇದನ್ನು ತಪ್ಪಿಸಲು ಸಂಚಾರ ಚಿಹ್ನೆಗಳ ಕಡ್ಡಾಯ ಪಾಲನೆ ಮಾಡಿದರೆ ಅಪಘಾತಗಳಿಗೆ ಕಡಿವಾಣ ಬೀಳಲಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜು ಪ್ರಾಚಾರ್ಯ ಡಾ.ಪಿ. ವಿಠ್ಠಲರಡ್ಡಿ ಮಾತನಾಡಿ, ಬೈಕ್ ನಲ್ಲಿ ಇಬ್ಬರಿಗಿಂತ ಹೆಚ್ಚು ಜನ ಪ್ರಯಾಣಿಸಬಾರದು. ವಾಹನದ ಎಲ್ಲ ದಾಖಲೆಗಳನ್ನು ಕಾಲಕ್ಕೆೆ ತಕ್ಕಂತೆ ನವೀಕರಿಸಿಕೊಳ್ಳಬೇಕು. ವಾಹನ ಚಲಾಯಿಸುವಾಗ ಮೊಬೈಲ್ ಬಳಸಬಾರದು ಎಂದು ಹೇಳಿದರು.

ಮೋಟಾರು ವಾಹನ ತರಬೇತಿ ಶಾಲೆ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವರಾಜ ಜಮಾದಾರ ಮಾತನಾಡಿ, ಮದುವೆ, ಜನ್ಮ ದಿನ, ಗೃಹ ಪ್ರವೇಶ ಇತರ ಸಮಾರಂಭಗಳಲ್ಲಿ ಉಡುಗೊರೆಯಾಗಿ ಹೆಲ್ಮೆಟ್ ನೀಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಡ್ಡಾಯವಾಗಿ ಹೆಲ್ಮೆಟ್ ಹಾಕಿ ಬೈಕ್ ಚಲಾಯಿಸಬೇಕು ಎಂದರು.

ಮೋಟಾರು ವಾಹನ ನಿರೀಕ್ಷಕಿ ಈರಮ್ಮಾ ಸಿ., ಉಪ ಪ್ರಾಂಶುಪಾಲ ಅನೀಲಕುಮಾರ ಆಣದೂರೆ, ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ದೀಪಾ ರಾಗಾ, ಮೋಟಾರು ವಾಹನ ತರಬೇತಿ ಶಾಲೆ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಗುಮ್ಮೆ, ಸಂತೋಷ ರಾಯಿಕೋಟಿ ಇತರರಿದ್ದರು.

ಮೀರಾ ಖೇಣಿ ಸ್ವಾಗತಿಸಿದರು. ಬಸವರಾಜ ಬಿರಾದಾರ್ ನಿರೂಪಣೆ ಮಾಡಿ, ವಂದಿಸಿದರು. ಸಾರಿಗೆ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಹೆಲ್ಮೆಟ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net