ಔರಾದ: ಗ್ರಾಮಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಮೇಲೆ ನಿಗಾ ವಹಿಸುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಸಾರ್ವಜನಿಕರು ಕೂಡ ಸಹಕರಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ ತಿಳಿಸಿದರು.
ತಾಲ್ಲೂಕಿನ ವಡಗಾಂವ ವ್ಯಾಪ್ತಿಯಲ್ಲಿನ ಜಂಬಗಿ, ಮಹಾರಾಜವಾಡಿ, ವಲ್ಲೇಪೂರ, ಸೋರಳ್ಳಿ, ಕಂದಗೂಳ, ಖಾನಾಪೂರ, ಬೋರ್ಗಿ(ಜೆ) ಹಾಗೂ ಖಾಶೆಂಪೂರ (ಬಿ)ನಲ್ಲಿ ಗ್ರಾಮ ಸಂಚಾರ ನಡೆಸಿ ಅವರು ಮಾತನಾಡಿದರು.
ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದೆ. ಪ್ರತಿ ಗ್ರಾಮದಲ್ಲಿ ಒಂದಿಲ್ಲೊಂದು ಕಾಮಗಾರಿ ಚಾಲ್ತಿಯಲ್ಲಿದೆ. ಈ ಕಾಮಗಾರಿಗಳ ಮೇಲೆ ನಿಗಾ ವಹಿಸಬೇಕು. ಹತ್ತಿರವಿದ್ದು ಕೆಲಸ ಸರಿಯಾಗಿ ಮಾಡಿಕೊಂಡಲ್ಲಿ ಕಾಮಗಾರಿ ಗುಣಮಟ್ಟದಿಂದ ಆಗಲು ಸಾಧ್ಯವಿದೆ. ನಾಗರಿಕರು ತಮ್ಮ ಗ್ರಾಮದ ವಿಕಾಸಕ್ಕಾಗಿ ಮುತುವರ್ಜಿ ತೋರಿಸಬೇಕು ಎಂದು ಎಂದರು.
ಕೆಲವು ಗ್ರಾಮಗಳಲ್ಲಿ ನಾನು ಭೇಟಿ ನೀಡಿದಾಗ ಮಾತ್ರ ಬೇಡಿಕೆಗಳನ್ನು ಸಲ್ಲಿಸುತ್ತಾರೆ. ನಂತರ ಮರೆತು ಬಿಡುತ್ತಾರೆ. ಹೀಗಾದರೆ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಆದ್ದರಿಂದ ಎಲ್ಲ ಗ್ರಾಮಗಳಲ್ಲಿ ಗ್ರಾಮ ಅಭಿವೃದ್ಧಿ ಸಮಿತಿಯೊಂದನ್ನು ರಚಿಸಿಕೊಂಡು ಊರಲ್ಲಿ ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿ ಒಂದೊಂದಾಗಿ ಮಾಡಿಸಿಕೊಳ್ಳಲು ಮುಂದಾಗಬೇಕು. ಅಭಿವೃದ್ಧಿ ಕೆಲಸಗಳಿಗೆ ನನ್ನ ಸಹಕಾರ ಸದಾ ಇದ್ದು, ಗ್ರಾಮಸ್ಥರ ಬೇಡಿಕೆಗಳನ್ನು ಆದ್ಯತೆಗೆ ಅನುಗುಣ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು.
ಮಹಾರಾಜವಾಡಿ, ವಲ್ಲೇಪೂರ, ಸೋರಳ್ಳಿ, ಕಂದಗೂಳ, ಖಾನಾಪೂರ, ಬೋರ್ಗಿ(ಜೆ), ಖಾಶೆಂಪೂರ(ಬಿ) ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಶಾಲೆಗಳಲ್ಲಿ 14 ಲಕ್ಷ ಮೊತ್ತದ ಶಾಲೆ ಉನ್ನತೀಕರಣ, ದುರಸ್ತಿ, ಕುಡಿಯುವ ನೀರು, ಒಹೆಚ್‌ಟಿ ಟ್ಯಾಂಕ್, ವಿದ್ಯುತೀಕರಣ, ಸೋಲಾರ್ ಪೆನಲ್ ಅಳವಡಿಕೆ ಕಾಮಗಾರಿಗಳಿಗೆ ಪೂಜೆ ನೆರವೇರಿಸಿದರು. ಶಾಲೆ, ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರ ಕ್ರಮಕ್ಕಾಗಿ ಸೂಚಿಸಿದರು.
ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ತಾಲ್ಲೂಕು ಅಧಿಕಾರಿಗಳಾದ ಸುಭಾಷ, ರವಿ ಕಾರಬಾರಿ, ಡಾ.ಗಾಯತ್ರಿ, ಧೂಳಪ್ಪ, ವೆಂಕಟರಾವ ಶಿಂಧೆ, ಇಮಲಪ್ಪಾ, ಪ್ರಕಾಶ ನಿಪ್ಪಾಣಿ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಸಚಿನ ರಾಠೋಡ, ಸುಮನಬಾಯಿ, ಖಂಡೋಬಾ ಕಂಗಟೆ, ಮಲ್ಲಪ್ಪ ನೇಳಗೆ, ಶಿವರಾಜ ಖಳೂರೆ, ಪ್ರಕಾಶ ಮೇತ್ರೆ, ಪ್ರಕಾಶ ಖಾನಾಪೂರೆ, ಶಿವಾಂಜಯ ಬಿರಾದಾರ, ಪ್ರಕಾಶ ಜೀರ್ಗೆ, ನವನಾಥ ಭಾಲ್ಕೆ, ಬಾಬುರಾವ ಮಸ್ಕಲೆ, ಸಂದೀಪ ಪಾಟೀಲ, ಅರವಿಂದ ಟೊಣಪೆ, ನರಸಿಂಗ್ ಬುದ್ರೆ, ಅಮರ ಸಾವಳೆ, ಧನರಾಜ ಪಾಟೀಲ, ಸಂಗಮೇಶ ಬೋರ್ಗಿ ಸೇರಿದಂತೆ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.